ಅಳಿವಿನಂಚಿನಲ್ಲಿರುವ ಪಾರಂಪರಿಕ ತಾಣಗಳ ಪಟ್ಟಿಯಿಂದ ವೆನಿಸ್ ಹೊರಕ್ಕೆ

Photo: NDTV
ರೋಮ್: ಯುನೆಸ್ಕೋದ ಅಳಿವಿನಂಚಿನಲ್ಲಿರುವ ಪಾರಂಪರಿಕ ತಾಣಗಳ ಪಟ್ಟಿಯಿಂದ ಇಟಲಿಯ ನಗರ ವೆನಿಸ್ ಅನ್ನು ಸೇರಿಸಲಾಗಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ಈ ಕ್ರಮವನ್ನು ಸ್ವಾಗತಿಸುವುದಾಗಿ ನಗರದ ಮೇಯರ್ ಲುಯಿಗಿ ಬ್ರಗ್ನಾರೊ ಪ್ರತಿಕ್ರಿಯಿಸಿದ್ದಾರೆ.
ಆದರೆ ಜನಪ್ರಿಯ ಪ್ರವಾಸಿ ತಾಣವಾಗಿರುವ ವೆನಿಸ್ಗೆ ಸಾಮೂಹಿಕ ಪ್ರವಾಸೋದ್ಯಮ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸೌದಿ ಅರೆಬಿಯಾದಲ್ಲಿ ನಡೆದ ಸಭೆಯಲ್ಲಿ, ವೆನಿಸ್ನ ಅತ್ಯುತ್ತಮ ಸಾರ್ವತ್ರಿಕ ಮೌಲ್ಯವು `ಬೆಳೆಯುತ್ತಿರುವ ಮತ್ತು ಹೆಚ್ಚುತ್ತಿರುವ ತುರ್ತು ಬೆದರಿಕೆಯ' ಅಡಿಯಲ್ಲಿದೆ ಎಂಬ ತಜ್ಞರ ಸಂಶೋಧನೆಗಳನ್ನು ಸದಸ್ಯ ದೇಶಗಳು ಕಡೆಗಣಿಸಿದ್ದು ವೆನಿಸ್ ನಗರಾಡಳಿತದ ಸಂರಕ್ಷಣಾ ಕ್ರಮಗಳನ್ನು ಸ್ವಾಗತಿಸಿವೆ. ಎರಡು ದಿನಗಳ ಹಿಂದೆ ವೆನಿಸ್ ನಗರಾಡಳಿತ ಅನುಮೋದಿಸಿದ ಪ್ರಾಯೋಗಿಕ ಯೋಜನೆಯು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ವಿಧಿಸಲು ಅವಕಾಶ ನೀಡಿದೆ.
ಎರಡು ವರ್ಷದ ಹಿಂದೆಯೂ ವೆನಿಸ್ ನಗರ ಅಪಾಯದಲ್ಲಿರುವ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಿಂದ ಹೊರಗುಳಿಯಲು ಯಶಸ್ವಿಯಾಗಿತ್ತು. ಆದರೆ ಯುನೆಸ್ಕೋದ ಕ್ರಮದ ಬಗ್ಗೆ `ವಿ ಆರ್ ಹಿಯರ್ ವೆನಿಸ್' ಎನ್ಜಿಒ ಸಂಘಟನೆ, `ಯೂನಿಯನ್ ಆಫ್ ಕನ್ಸರ್ನ್ಡ್ ಸೈಂಟಿಸ್ಟ್' ಅಸಮಾಧಾನ ವ್ಯಕ್ತಪಡಿಸಿದ್ದು ಇದು ವೆನಿಸ್ ಅನ್ನು ಕೇವಲ ತಾಣವಾಗಿ ಪರಿವರ್ತಿಸಲಿದೆ ಮತ್ತು ನಿವಾಸಿಗಳು ಹಾಗೂ ಹೊಸ ವ್ಯಾಪಾರಗಳನ್ನು ಆಕರ್ಷಿಸುವ ಅಭಿವೃದ್ಧಿ ಕೇಂದ್ರವಾಗುವ ಅವಕಾಶವನ್ನು ತಪ್ಪಿಸಲಿದೆ ಎಂದು ಪ್ರತಿಕ್ರಿಯಿಸಿವೆ.