ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆ: ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರ; ಮನೆಗಳಿಗೆ ಬೆಂಕಿ, ಕಚ್ಚಾ ಬಾಂಬ್ ದಾಳಿ

Photos: X.com | PTI
ಢಾಕಾ: ಶೇಖ್ ಹಸೀನಾ ಅವರು ಡಿ.16ರಂದು ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿದ ಹಿನ್ನೆಲೆ ದೇಶದಲ್ಲಿ ರಾಜಕೀಯ ಉದ್ವಿಗ್ನತೆ, ಹಿಂಸಾಚಾರ ಭುಗಿಲೆದ್ದಿದೆ. ಬಾಂಗ್ಲಾದೇಶದ ಹಲವು ಜಿಲ್ಲೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ವಿವಿಧೆಡೆ ಬೆಂಕಿ ಹಚ್ಚುವ ಘಟನೆಗಳು, ಕಚ್ಚಾ ಬಾಂಬ್ ಸ್ಫೋಟಗಳು ಹಾಗೂ ಘರ್ಷಣೆಗಳು ವರದಿಯಾಗಿವೆ. ಹಸೀನಾ ಅವರ ತವರು ಜಿಲ್ಲೆ ಗೋಪಾಲಗಂಜ್ನಲ್ಲಿ ಮತ್ತಷ್ಟು ಹಿಂಸಾಚಾರದ ಘಟನೆ ಸಂಭವಿಸುವ ಸಾಧ್ಯತೆ ಇರುವುದರಿಂದ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದ್ದು, ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
2024ರಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧದ ದಮನಕಾರಿ ಕ್ರಮಗಳಿಗೆ ಸಂಬಂಧಿಸಿದಂತೆ ಶೇಖ್ ಹಸೀನಾಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. 1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆಗೊಂಡ ನೆನಪಿಗಾಗಿ ಡಿಸೆಂಬರ್ 16ರಂದು ಬಾಂಗ್ಲಾದೇಶದಲ್ಲಿ ವಿಜಯ ದಿನವನ್ನು ಆಚರಿಸಲಾಗುತ್ತದೆ. ಅದೇ ದಿನ ಅವರು ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.
ವರದಿಯ ಪ್ರಕಾರ, ಬಾಂಗ್ಲಾದೇಶದ 7 ಜಿಲ್ಲೆಗಳಲ್ಲಿ ಗಡಿ ಭದ್ರತಾ ಪಡೆಯ 120 ತುಕಡಿಗಳನ್ನು ನಿಯೋಜಿಸಲಾಗಿದೆ. ಒಂದು ತುಕಡಿಯಲ್ಲಿ ಸಾಮಾನ್ಯವಾಗಿ 30ರಿಂದ 40 ಸಿಬ್ಬಂದಿ ಇರುತ್ತಾರೆ. ಗೋಪಾಲಗಂಜ್ ಒಂದರಲ್ಲೇ 56 ತುಕಡಿಗಳನ್ನು ನಿಯೋಜಿಸಲಾಗಿದೆ. ಢಾಕಾ, ಗಾಝಿಪುರ, ನಾರಾಯಣಗಂಜ್, ಗೋಪಾಲಗಂಜ್, ಚಟ್ಟೋಗ್ರಾಮ್ ಹಾಗೂ ಕಾಕ್ಸ್ ಬಝಾರ್ ಜಿಲ್ಲೆಗಳಲ್ಲಿ ಭದ್ರತಾ ನಿಯೋಜನೆ ಮಾಡಲಾಗಿದೆ.
ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಢಾಕಾಗೆ ತೆರಳುವ ನೇರ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮಾಜಿ ಮುಖ್ಯಸ್ಥ ಮುಹಮ್ಮದ್ ಯೂನುಸ್ ಸ್ಥಾಪಿಸಿರುವ ಗ್ರಾಮೀಣ ಬ್ಯಾಂಕ್ನ 100ಕ್ಕೂ ಅಧಿಕ ಶಾಖೆಗಳಿಗೆ ಬೆಂಕಿ ಹಚ್ಚುವ ಮೂಲಕ ಗುರಿಯಾಗಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಮಾರುಕಟ್ಟೆ ಬಂದ್, ಬಸ್ ಸಂಚಾರ ಸ್ಥಗಿತ:
ನಿಷೇಧಿತ ಅವಾಮಿ ಲೀಗ್ ಪಕ್ಷವು ನವೆಂಬರ್ 29 ಮತ್ತು 30ರಂದು ಬಾಂಗ್ಲಾದೇಶದಲ್ಲಿ ಬಂದ್ಗೆ ಕರೆ ನೀಡಿತ್ತು. ಬಂದ್ಗೆ ಬೆಂಬಲ ಸೂಚಿಸಿ ಶನಿವಾರ ರಾತ್ರಿ ಗೋಪಾಲಗಂಜ್ನಾದ್ಯಂತ ಪಂಜಿನ ಮೆರವಣಿಗೆಗಳನ್ನು ನಡೆಸಲಾಗಿದ್ದು, ಧ್ವನಿವರ್ಧಕಗಳ ಮೂಲಕ ಸಾರ್ವಜನಿಕ ಪ್ರಕಟಣೆಗಳನ್ನೂ ನೀಡಲಾಗಿದೆ ಎಂದು ವರದಿಯಾಗಿದೆ.
ಬಂದ್ ಘೋಷಣೆ ಹಿನ್ನೆಲೆ ಗೋಪಾಲಗಂಜ್ನಲ್ಲಿ ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದು, ಬಸ್ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.






