ಭಾರತದ ವಿರುದ್ಧದ ನಿರ್ಬಂಧ ಬೆದರಿಕೆಗಳು ಫಲಿಸುವುದಿಲ್ಲ: ಪುಟಿನ್

ವ್ಲಾಡಿಮಿರ್ ಪುಟಿನ್ | Photo Credit : PTI
ಸೇಂಟ್ ಪೀಟರ್ಸ್ಬರ್ಗ್: ಭಾರತದ ಮೇಲೆ ನಿರ್ಬಂಧಗಳ ಮೂಲಕ ಒತ್ತಡ ಹೇರಲು ಮಾಡುವ ಯಾವುದೇ ಪ್ರಯತ್ನ ಫಲಿಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಸೇಂಟ್ ಪೀಟರ್ಸ್ಬರ್ಗ್ ಅಂತರರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ (ಎಸ್ಪಿಐಇಎಫ್) ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಸ್ವತಂತ್ರ ನೀತಿಯನ್ನು ಅನುಸರಿಸುತ್ತಿದ್ದು, ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಹೇಳಿದರು.
ಸು–57 ಯುದ್ಧವಿಮಾನವನ್ನು ಭಾರತ ಜತೆ ಜಂಟಿಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ರಷ್ಯಾ ಈ ಹಿಂದೆ ನೀಡಿತ್ತು. ಆದರೆ ಯೋಜನೆ ಕಾರ್ಯರೂಪಕ್ಕೆ ಬರದ ಕಾರಣ ರಷ್ಯಾ ಸ್ವತಂತ್ರವಾಗಿ ಅದನ್ನು ಅಭಿವೃದ್ಧಿಪಡಿಸಿದೆ ಎಂದು ಪುಟಿನ್ ತಿಳಿಸಿದರು. ಈಗ ಆ ಯುದ್ಧವಿಮಾನವನ್ನು ಮಾರಾಟ ಮಾಡಲು ರಷ್ಯಾ ಸಿದ್ಧವಿದೆ ಎಂದರು.
ಭಾರತ–ರಷ್ಯಾ ರಕ್ಷಣಾ ಸಹಕಾರವು ಕೇವಲ ಖರೀದಿ–ಮಾರಾಟಕ್ಕೆ ಸೀಮಿತವಾಗಿಲ್ಲ. ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಗೂ ಎರಡೂ ದೇಶಗಳು ಒತ್ತು ನೀಡಿವೆ ಎಂದು ಹೇಳಿದರು. ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಯೋಜನೆಯನ್ನು ಇದಕ್ಕೆ ಉದಾಹರಣೆಯಾಗಿ ಉಲ್ಲೇಖಿಸಿದರು.
ಸು–57 ಅಥವಾ ಎಸ್–500 ವಾಯು ರಕ್ಷಣಾ ವ್ಯವಸ್ಥೆಯಂತಹ ರಷ್ಯಾದ ರಕ್ಷಣಾ ಸಾಧನಗಳ ಖರೀದಿಗೆ ಸಂಬಂಧಿಸಿದಂತೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಪುಟಿನ್ ಹೇಳಿದರು.
ಪ್ರಧಾನಿಯಾಗುವ ಮೊದಲು ನರೇಂದ್ರ ಮೋದಿ ಅವರಿಗೆ ಅಮೆರಿಕ ಪ್ರವೇಶ ವೀಸಾ ನಿರಾಕರಿಸಲಾಗಿದ್ದ ಪ್ರಸಂಗವನ್ನು ಉಲ್ಲೇಖಿಸಿದ ಅವರು, ಈಗ ಭಾರತ–ಅಮೆರಿಕ ಸಂಬಂಧಗಳು ಯಶಸ್ವಿಯಾಗಿ ಬೆಳೆಯುತ್ತಿವೆ ಎಂದು ಹೇಳಿದರು.
ಭಾರತದೊಂದಿಗಿನ ರಷ್ಯಾದ ಸಹಕಾರವು ರಾಜಕೀಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿಲ್ಲ. ಭಾರತಕ್ಕೆ ನೀಡಿರುವ ಬದ್ಧತೆಗಳನ್ನು ರಷ್ಯಾ ಮುಂದೆಯೂ ಪಾಲಿಸಲಿದೆ ಎಂದು ಪುಟಿನ್ ಹೇಳಿದರು.






