ಶ್ವೇತಭವನದ ಬಳಿ ಶಸ್ತ್ರಾಸ್ತ್ರಗಳೊಂದಿಗೆ ವೆನಿಝುವೆಲಾ ಪ್ರಜೆ ಬಂಧನ
‘ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ತಲೆಯೊಳಗೆ ಧ್ವನಿಗಳು ಕೇಳಿಸುತ್ತಿದ್ದವು’ ಎಂದ ಆರೋಪಿ

Photo Credit: India Today
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ತನ್ನ ತಲೆಯೊಳಗೆ ಧ್ವನಿಗಳು ಕೇಳಿಸುತ್ತಿದ್ದವು ಎಂದು ಹೇಳಿರುವ 26 ವರ್ಷದ ವೆನಿಝುವೆಲಾ ಪ್ರಜೆಯೊಬ್ಬನನ್ನು ಶ್ವೇತಭವನದ ಸಮೀಪ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಶ್ವೇತಭವನದ ಸಮೀಪದ ಕಾನ್ಸ್ಟಿಟ್ಯೂಷನ್ ಅವೆನ್ಯೂನಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ನೀಲಿ ಬಣ್ಣದ ಫೋರ್ಡ್ ಎಫ್-150 ಪಿಕಪ್ ಟ್ರಕ್ ವೊಂದನ್ನು ಗಸ್ತಿನಲ್ಲಿದ್ದ ಸೀಕ್ರೆಟ್ ಸರ್ವಿಸ್ ಅಧಿಕಾರಿಯೊಬ್ಬರು ಗಮನಿಸಿದ್ದಾರೆ. ವಾಹನದೊಳಗಿದ್ದ ವ್ಯಕ್ತಿಯ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆತನ ಬಳಿ ಶಸ್ತ್ರಾಸ್ತ್ರಗಳಿವೆಯೇ ಎಂದು ಪ್ರಶ್ನಿಸಿದ್ದಾರೆ.
ಬಂಧಿತನನ್ನು 26 ವರ್ಷದ ರಾನಿ ಯಾರ್ಡಿಕ್ಸ್ ಗ್ವಾನಿಪಾ ಕ್ರಿನೋಸ್ ಎಂದು ಗುರುತಿಸಲಾಗಿದೆ. ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ತನ್ನ ತಲೆಯೊಳಗೆ ಧ್ವನಿಗಳು ಕೇಳಿಸುತ್ತಿದ್ದವು ಎಂದು ಆತ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಅಧಿಕಾರಿಗಳು ಶಸ್ತ್ರಾಸ್ತ್ರಗಳ ಬಗ್ಗೆ ಪ್ರಶ್ನಿಸಿದಾಗ ಆತ ತಲೆಯಾಡಿಸಿ ಒಪ್ಪಿಗೆ ಸೂಚಿಸಿದ್ದಾನೆ. ಬಳಿಕ ಬೆರಳಿನಿಂದ ಬಂದೂಕಿನ ಸನ್ನೆಯನ್ನೂ ಮಾಡಿದ್ದಾನೆ. ವಾಹನದಿಂದ ಕೆಳಗಿಳಿದ ನಂತರ ಗೂಗಲ್ ಅನುವಾದದ ನೆರವಿನಿಂದ ಅಧಿಕಾರಿಗಳೊಂದಿಗೆ ಮಾತನಾಡಿದ್ದಾನೆ.
ಯಾರೋ ತನ್ನನ್ನು ಕೊಲ್ಲಲು ಬಂದೂಕು ಬಳಸಲು ಯತ್ನಿಸಿದ್ದರು. ಅದನ್ನು ತಾನು ಅವರಿಂದ ಕಸಿದುಕೊಂಡಿದ್ದಾಗಿ ಆತ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಅಲ್ಲದೆ, ವಾಹನದೊಳಗಿದ್ದ ಕಂದು ಬಣ್ಣದ ಚೀಲವೊಂದರತ್ತ ಅಧಿಕಾರಿಗಳ ಗಮನ ಸೆಳೆದಿದ್ದಾನೆ.
ವಾಹನವನ್ನು ಪರಿಶೀಲಿಸಿದಾಗ ಮ್ಯಾಕ್-10 ಮೆಷಿನ್ ಪಿಸ್ತೂಲು, ಗ್ಲಾಕ್ 43ಎಕ್ಸ್ ಪಿಸ್ತೂಲು ಹಾಗೂ ಎಆರ್-15 ರೈಫಲ್ ಪತ್ತೆಯಾಗಿವೆ. ಇದರೊಂದಿಗೆ ಡಜನ್ಗಟ್ಟಲೆ ಸುತ್ತಿನ ಮದ್ದುಗುಂಡುಗಳೂ ದೊರೆತಿವೆ. ಈ ವಾಹನವನ್ನು ದಕ್ಷಿಣ ಕೆರೊಲಿನಾದಲ್ಲಿ ಕಳವು ಮಾಡಿರುವುದಾಗಿ ವರದಿಯಾಗಿತ್ತು.
ಅಮೆರಿಕದ ಗೃಹ ಭದ್ರತಾ ಇಲಾಖೆಯ ಪ್ರಕಾರ, ವಾಷಿಂಗ್ಟನ್ಗೆ ಬಂದು ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ತನ್ನ ತಲೆಯೊಳಗೆ ಧ್ವನಿಗಳು ಸೂಚಿಸಿದ್ದವು ಎಂದು ಕ್ರಿನೋಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಆದರೆ, ಆತನ ಈ ಹೇಳಿಕೆ ಡಿಸಿ ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ರಿಮಿನಲ್ ದೂರಿನ ಅಫಿಡವಿಟ್ ನಲ್ಲಿ ಉಲ್ಲೇಖವಾಗಿಲ್ಲ.
ಈ ಘಟನೆಯನ್ನು ಶ್ವೇತಭವನದ ಸುತ್ತಮುತ್ತ ಹೆಚ್ಚುತ್ತಿರುವ ಭದ್ರತಾ ಸವಾಲುಗಳ ಭಾಗ ಎಂದು ಸೀಕ್ರೆಟ್ ಸರ್ವಿಸ್ ನಿರ್ದೇಶಕ ಸೀನ್ ಕರನ್ ಹೇಳಿದ್ದಾರೆ. ಇಂತಹ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಸೀಕ್ರೆಟ್ ಸರ್ವಿಸ್ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಕ್ರಿನೋಸ್ ವಿರುದ್ಧ ಕಳವು ಮಾಡಲಾದ ವಾಹನದ ಅನಧಿಕೃತ ಬಳಕೆ, ಕಳವು ಸೊತ್ತು ಸ್ವೀಕರಿಸುವುದು ಹಾಗೂ ಪರವಾನಗಿ ಇಲ್ಲದೆ ಪಿಸ್ತೂಲು ಮತ್ತು ರೈಫಲ್ ಹೊಂದಿರುವುದು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.
ಶುಕ್ರವಾರ ಡಿಸಿ ಉನ್ನತ ನ್ಯಾಯಾಲಯಕ್ಕೆ ಹಾಜರಾದ ಆರೋಪಿಯನ್ನು ಜಾಮೀನು ನೀಡದೆ ವಶದಲ್ಲಿಡಲಾಗಿದೆ. ಆತ ಪ್ರಸ್ತುತ ಅಮೆರಿಕದ ಮಾರ್ಷಲ್ಸ್ ಸೇವೆಯ ವಶದಲ್ಲಿದ್ದಾನೆ. 2024ರ ಮಾರ್ಚ್ ನಲ್ಲಿ ಟೆಕ್ಸಾಸ್ ಮೂಲಕ ಅಮೆರಿಕ ಪ್ರವೇಶಿಸಿದ್ದ ಆತ, ದಾಖಲೆಗಳಿಲ್ಲದೆ ದೇಶದಲ್ಲಿ ನೆಲೆಸಿದ್ದ ವೆನಿಝುವೆಲಾ ವಲಸಿಗ ಎಂದು ಗೃಹ ಭದ್ರತಾ ಇಲಾಖೆ ತಿಳಿಸಿದೆ. ಆತನ ವಿರುದ್ಧ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ (ಐಸಿಇ) ತಡೆ ಆದೇಶವನ್ನೂ ದಾಖಲಿಸಿದೆ.






