ಇರಾನ್ ಸಂಘರ್ಷದಿಂದ ಇತಿಹಾಸದಲ್ಲಿಯೇ ದೊಡ್ಡ ಭಾರೀ ಇಂಧನ ಬಿಕ್ಕಟ್ಟು: ಐಇಎ ಎಚ್ಚರಿಕೆ

ಸಾಂದರ್ಭಿಕ ಚಿತ್ರ (PTI)
ಪ್ಯಾರಿಸ್: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ನಡೆಯುತ್ತಿರುವ ಸಂಘರ್ಷವು ಜಗತ್ತಿನ ಮಟ್ಟದಲ್ಲಿ ದೊಡ್ಡ ಇಂಧನ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಮುಖ್ಯಸ್ಥ ಫಾತಿಹ್ ಬಿರೋಲ್ ತಿಳಿಸಿದ್ದಾರೆ.
ಫ್ರಾನ್ಸ್ ಇಂಟರ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು, “ಇದು ಇತಿಹಾಸದಲ್ಲಿಯೇ ಅತಿದೊಡ್ಡ ಬಿಕ್ಕಟ್ಟು ಆಗಬಹುದು. ಈಗಾಗಲೇ ಪೆಟ್ರೋಲ್ ಮತ್ತು ಅನಿಲದ ಕೊರತೆ ಸಮಸ್ಯೆಗಳಿವೆ. ಅದಕ್ಕೆ ರಷ್ಯಾ ಸಂಬಂಧಿತ ಸಮಸ್ಯೆಗಳು ಸೇರಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ” ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಸಾಗಣೆಗೆ ಅಡಚಣೆ ಉಂಟಾಗಿದೆ. ಹಾರ್ಮುಝ್ ಜಲಸಂಧಿಯಲ್ಲಿ ಸಮುದ್ರದಲ್ಲಿನ ಸರಕು ಸಾಗಣೆಗೆ ತೊಂದರೆಯಾಗಿದೆ. ಜಗತ್ತಿನ ತೈಲ ಮತ್ತು ಎಲ್ಎನ್ಜಿ ಸಾಗಣೆಯ ದೊಡ್ಡ ಭಾಗ ಇದೇ ಮಾರ್ಗದ ಮೂಲಕ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ, ರಷ್ಯಾ–ಉಕ್ರೇನ್ ಯುದ್ಧದಿಂದ ಯುರೋಪ್ಗೆ ರಷ್ಯಾದ ಅನಿಲ ಸರಬರಾಜು ಕಡಿಮೆಯಾಗಿರುವುದರಿಂದ ಇಂಧನ ಮಾರುಕಟ್ಟೆ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ. ಈ ತಿಂಗಳ ಆರಂಭದಲ್ಲೇ ಬಿರೋಲ್ ಅವರು ಪ್ರಸ್ತುತ ಪರಿಸ್ಥಿತಿಯನ್ನು 1973, 1979 ಮತ್ತು 2022ರ ಇಂಧನ ಬಿಕ್ಕಟ್ಟುಗಳಿಗಿಂತಲೂ ಗಂಭೀರ ಎಂದು ಹೇಳಿದ್ದಾರೆ.
ಮಾರ್ಚ್ನಲ್ಲಿ, ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಐಇಎ ಸದಸ್ಯ ರಾಷ್ಟ್ರಗಳು ತಮ್ಮ ದಾಸ್ತಾನುಗಳಿಂದ 400 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆ ಮಾಡಲು ಒಪ್ಪಿಕೊಂಡಿವೆ.
ಈ ಬೆಳವಣಿಗೆಗಳಿಂದ ಜಾಗತಿಕ ಇಂಧನ ಪೂರೈಕೆ, ಬೆಲೆ ಹಾಗೂ ಆರ್ಥಿಕ ಸ್ಥಿತಿಗೆ ದೊಡ್ಡ ಸವಾಲು ಎದುರಾಗುವ ಸಾಧ್ಯತೆ ಇದೆ.






