“ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ”: ಉಮರ್ ಖಾಲಿದ್ ಗೆ ನ್ಯೂಯಾರ್ಕ್ ನ ನೂತನ ಮೇಯರ್ ಝೊಹ್ರಾನ್ ಮಮ್ದಾನಿಯವರಿಂದ ಕೈಬರಹದ ಪತ್ರ

ಉಮರ್ ಖಾಲಿದ್ | Photo Credit : PTI \ X
ನ್ಯೂಯಾರ್ಕ್: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಬಂಧನದಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ಕೈಬರಹದ ಪತ್ರ ಬರೆದಿದ್ದಾರೆ.0
Zohran Mamdani writes to Umar Khalid.
— banojyotsna ... (@banojyotsna) January 1, 2026
December 2025. #FreeUmarKhalid#FreeAllPoliticalPrisoners pic.twitter.com/QTYe06cRp5
ಡೆಮಾಕ್ರಟಿಕ್ ಸಮಾಜವಾದಿ ಝೊಹ್ರಾನ್ ಮಮ್ದಾನಿ ಗುರುವಾರ ಮಧ್ಯರಾತ್ರಿಯ ನಂತರ ಅಮೆರಿಕದ ಅತಿದೊಡ್ಡ ನಗರದ ಮೊದಲ ಮುಸ್ಲಿಂ ಮತ್ತು ಭಾರತೀಯ ಮೂಲದ ಮೇಯರ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಪ್ರಸ್ತುತ ದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ ಖಾಲಿದ್ ರೊಂದಿಗೆ ಹಿಂದೆ ನಡೆದ ಸಂವಾದಗಳನ್ನು ಸ್ಮರಿಸಿಕೊಂಡಿರುವ ಮಮ್ದಾನಿ, ತಮ್ಮ ಪತ್ರದಲ್ಲಿ ಒಗ್ಗಟ್ಟು ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು Deccan Chronicle ವರದಿ ಮಾಡಿದೆ.
“ಪ್ರಿಯ ಉಮರ್, ಕಹಿಯ ಬಗ್ಗೆ ನಿಮ್ಮ ಮಾತುಗಳನ್ನು ನಾನು ಆಗಾಗ್ಗೆ ನೆನಪಿಸಿಕೊಳ್ಳುತ್ತೇನೆ. ಅದು ಒಬ್ಬರ ಆತ್ಮವನ್ನು ಆವರಿಸದಂತೆ ನೋಡಿಕೊಳ್ಳಬೇಕೆಂಬ ನಿಮ್ಮ ಮಾತುಗಳು ನನಗೆ ಆಗಾಗ್ಗೆ ನೆನಪಾಗುತ್ತವೆ. ನಿಮ್ಮ ಪೋಷಕರನ್ನು ಭೇಟಿಯಾದುದು ಸಂತೋಷವಾಯಿತು” ಎಂದು ಅವರು ಬರೆದಿದ್ದಾರೆ.
ಈ ಪತ್ರದ ಚಿತ್ರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ವೈರಲ್ ಆಗಿದ್ದು, ಖಾಲಿದ್ರ ಸ್ನೇಹಿತೆ ಬನೋಜ್ಯೋತ್ಸ್ನಾ ಲಹಿರಿ ಅದನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ನಲ್ಲಿ ಖಾಲಿದ್ ರ ಪೋಷಕರು ಅಮೆರಿಕಕ್ಕೆ ತೆರಳಿದ್ದ ವೇಳೆ ಮಮ್ದಾನಿ ಸೇರಿದಂತೆ ಹಲವು ಜನರನ್ನು ಭೇಟಿಯಾದರು ಎಂದು ಅವರು ತಿಳಿಸಿದ್ದಾರೆ. ಆದರೆ ಪತ್ರವನ್ನು Telegraph Online ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.
2020ರ ಸೆಪ್ಟೆಂಬರ್ನಲ್ಲಿ ದಿಲ್ಲಿ ಗಲಭೆಗೆ ಸಂಬಂಧಿಸಿದ ಪಿತೂರಿ ಪ್ರಕರಣದಲ್ಲಿ ಖಾಲಿದ್ ಅವರನ್ನು ಬಂಧಿಸಲಾಗಿತ್ತು. ಒಂದು FIR ನಲ್ಲಿ ದೆಹಲಿ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಿದರೂ, UAPA ಅಡಿಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಅವರು ಇನ್ನೂ ಬಂಧನದಲ್ಲೇ ಇದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಜಾಮೀನು ಅರ್ಜಿಗಳನ್ನು ಹಲವು ಬಾರಿ ತಿರಸ್ಕರಿಸಲಾಗಿದೆ. ಡಿಸೆಂಬರ್ 2025ರಲ್ಲಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಮಮ್ದಾನಿ ಈ ಹಿಂದೆಯೂ ಖಾಲಿದ್ ರ ಬೆಂಬಲವಾಗಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಜೂನ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೆ ಮುನ್ನ ನ್ಯೂಯಾರ್ಕ್ನಲ್ಲಿ ನಡೆದ ‘ಹೌಡಿ, ಡೆಮಾಕ್ರಸಿ?!’ ಕಾರ್ಯಕ್ರಮದಲ್ಲಿ, ಅವರು ಖಾಲಿದ್ ರ ಜೈಲು ಬರಹಗಳ ಆಯ್ದ ಭಾಗಗಳನ್ನು ಓದಿದ್ದರು.
ಆ ವೇಳೆ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಯ ಸದಸ್ಯರಾಗಿದ್ದ ಮಮ್ದಾನಿ, ಸಭಿಕರನ್ನು ಉದ್ದೇಶಿಸಿ, “ನಾನು ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ವಾಂಸ ಹಾಗೂ ಮಾಜಿ ವಿದ್ಯಾರ್ಥಿ, ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರ ಪತ್ರವನ್ನು ಓದಲಿದ್ದೇನೆ. ಅವರು ಗುಂಪು ಹಲ್ಲೆ ಮತ್ತು ದ್ವೇಷದ ವಿರುದ್ಧ ಅಭಿಯಾನ ನಡೆಸಿದ್ದರು. UAPA ಅಡಿಯಲ್ಲಿ ಅವರು 1,000 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ಜಾಮೀನು ಅರ್ಜಿಗಳನ್ನು ಪದೇಪದೇ ತಿರಸ್ಕರಿಸಲಾಗಿದ್ದರೂ ಇನ್ನೂ ವಿಚಾರಣೆ ಆರಂಭವಾಗಿಲ್ಲ. ಹತ್ಯೆಯ ಪ್ರಯತ್ನದ ಆರೋಪವನ್ನೂ ಅವರು ಎದುರಿಸಿದ್ದಾರೆ” ಎಂದು ಹೇಳಿದ್ದರು.
ಡೆಮಾಕ್ರಟಿಕ್ ಸಮಾಜವಾದಿಯಾಗಿರುವ ಮಮ್ದಾನಿ, ತಳಮಟ್ಟದ ರಾಜಕೀಯ ಸಂಘಟನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದವರು. ಮೇಯರ್ ಹುದ್ದೆ ಅಲಂಕರಿಸುವ ಮೊದಲು ಅವರು ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.







