ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ: ಅಫ್ಘಾನಿಸ್ತಾನಕ್ಕೆ ಪಾಕ್ ಎಚ್ಚರಿಕೆ

Photo: indiatoday
ಇಸ್ಲಾಮಾಬಾದ್, ನ.12: ಪಾಕಿಸ್ತಾನವು ಯುದ್ಧದ ಸ್ಥಿತಿಯಲ್ಲಿದ್ದು ಯಾವುದೇ ಆಕ್ರಮಣಕ್ಕೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅಫ್ಘಾನಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ಮಂಗಳವಾರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಸಿಫ್ ` ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ತನ್ನ ಭೂಪ್ರದೇಶದೊಳಗೆ ಭಯೋತ್ಪಾದಕರ ಗುಂಪು ಕಾರ್ಯಾಚರಿಸಲು ಮುಕ್ತ ಅವಕಾಶ ನೀಡಿದೆ. ಅಫ್ಘಾನಿಸ್ತಾನದ ನೆಲದಿಂದ ಭಯೋತ್ಪಾದನೆಯ ಕೃತ್ಯಗಳನ್ನು ಯೋಜಿಸಿ ಕಾರ್ಯಗತಗೊಳಿಸಿದರೆ ಅದೇ ನಾಣ್ಯದಲ್ಲಿ ಉತ್ತರಿಸಬೇಕಾಗುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಆತ್ಮಾಹುತಿ ದಾಳಿಯ ಬಳಿಕ ರಾಷ್ಟ್ರೀಯ ಭದ್ರತಾ ಸಮಿತಿಯ ತುರ್ತು ಸಭೆ ಕರೆದ ಆಸಿಫ್ `ಸ್ಫೋಟವು ಇಡೀ ದೇಶಕ್ಕೆ ಎಚ್ಚರಿಕೆಯ ಕರೆಯಾಗಿದೆ. ಉಗ್ರಗಾಮಿಗಳ ಆಶ್ರಯತಾಣಗಳ ವಿರುದ್ಧ ತಾಲಿಬಾನ್ ಸರಕಾರದ ನಿಷ್ಕ್ರಿಯತೆಯಿಂದಾಗಿ ಪಾಕಿಸ್ತಾನ ಸರಕಾರದ ತಾಳ್ಮೆ ಮುಗಿದಿದೆ. ದೀರ್ಘಾವಧಿಯಿಂದಲೂ ಪಾಕಿಸ್ತಾನ ಗರಿಷ್ಠ ಸಂಯಮ ತಳೆದಿತ್ತು. ಆದರೆ ನಮ್ಮ ನೆರೆಯವರು ಕಣ್ಣುಮುಚ್ಚಿ ಕುಳಿತರೆ, ಗಡಿಯಾದ್ಯಂತ ಉದ್ದೇಶಿತ ಕ್ರಮ ಅನಿವಾರ್ಯವಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.





