"ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ, ಆದರೆ...": ಭಾರತದ ಮೇಲಿನ ಹೆಚ್ಚುವರಿ ಸುಂಕ ಸಮರ್ಥಿಸಿಕೊಂಡ ಟ್ರಂಪ್

ವಾಷಿಂಗ್ಟನ್: ಭಾರತದ ಮೇಲಿನ ಹೆಚ್ಚುವರಿ ಸುಂಕ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, “ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಆದರೆ, ಕಳೆದ ಹಲವಾರು ವರ್ಷಗಳಲ್ಲಿ ಈ ಬಾಂಧವ್ಯ ಏಕಪಕ್ಷೀಯವಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಮೆರಿಕದ ಮೇಲೆ ಭಾರತ ಅಧಿಕ ಸುಂಕ ಹೇರಿತ್ತು” ಎಂದು ತಿಳಿಸಿದ್ದಾರೆ.
“ಭಾರತ ಅಮೆರಿಕದ ಮೇಲೆ ಅಧಿಕ ಸುಂಕ ವಿಧಿಸುತ್ತಿತ್ತು. ಅದು ಇಡೀ ಜಗತ್ತಿನಲ್ಲೇ ಅತ್ಯಧಿಕವಾಗಿತ್ತು. ಆದ್ದರಿಂದ ನಾವು ಭಾರತದೊಂದಿಗೆ ಹೆಚ್ಚು ವ್ಯಾಪಾರ ನಡೆಸುತ್ತಿರಲಿಲ್ಲ. ಇದೇ ವೇಳೆ ನಾವು ಹೆಚ್ಚು ಸುಂಕ ವಿಧಿಸದಿದ್ದರಿಂದ, ಅವರು ನಮ್ಮ ಜೊತೆ ಹೆಚ್ಚು ವ್ಯವಹಾರ ಮಾಡುತ್ತಿದ್ದರು” ಎಂದು ಹೇಳಿದ್ದಾರೆ.
“ಹೀಗಾಗಿ ಅವರು ನಮ್ಮ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಅವರ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದರು. ಆದರೆ, ಅವರು ನಮ್ಮ ಮೇಲೆ ಶೇ. 100ರಷ್ಟು ಸುಂಕ ಹೇರಿದ್ದರಿಂದ, ನಾವು ಅವರಿಗೆ ಏನನ್ನೂ ರಫ್ತು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ಸರಿಯಲ್ಲ” ಎಂದು ಅವರು ಬೊಟ್ಟು ಮಾಡಿದ್ದಾರೆ.
ತಮ್ಮ ಮಾತಿಗೆ ಸಮರ್ಥನೆಯಾಗಿ ಅವರು ದ್ವಿಚಕ್ರ ವಾಹನ ಸಂಸ್ಥೆ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ನಿದರ್ಶನ ನೀಡಿದ್ದಾರೆ. “ಭಾರತದಲ್ಲಿ ಹಾರ್ಲೆ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಅದರ ಮೇಲೆ ಶೇ. 200ರಷ್ಟು ಸುಂಕ ಹೇರಲಾಗಿತ್ತು. ಇದರಿಂದ ಏನಾಯಿತು? ಭಾರತಕ್ಕೆ ಹೋಗಿ ಹಾರ್ಲೆ ಡೇವಿಡ್ಸನ್ ಘಟಕ ತೆರೆಯಬೇಕಾಯಿತು” ಎಂದು ಹೇಳಿದ್ದಾರೆ.
“ಅದೇ ರೀತಿ ಸಾವಿರಾರು ಕಂಪನಿಗಳು ಅಮೆರಿಕಕ್ಕೆ ಬರುತ್ತಿವೆ. ಅದರಲ್ಲಿ ಕಾರು, ಎಐ ಸಂಸ್ಥೆಗಳು ಸೇರಿವೆ. ಚೀನಾ, ಮೆಕ್ಸಿಕೊ, ಕೆನಡಾದಿಂದಲೂ ಕಂಪನಿಗಳು ಬರುತ್ತಿವೆ. ಅವರೆಲ್ಲರೂ ಅಮೆರಿಕದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸಲು ಬಯಸುತ್ತಿದ್ದಾರೆ” ಎಂದು ಅವರು ವಿವರಿಸಿದ್ದಾರೆ.







