ಅಮೆರಿಕ-ಇಸ್ರೇಲ್ ದಾಳಿ ಮಾಡಿದರೂ ನಾವು ಮಂಡಿಯೂರಿಲ್ಲ: ವಿಶ್ವಸಂಸ್ಥೆಯಲ್ಲಿ ಗುಡುಗಿದ ಇರಾನ್ ಅಧ್ಯಕ್ಷ ಪೆಝೆಶ್ಕಿಯನ್
ಸಭಾಂಗಣದಿಂದ ಹೊರನಡೆದ ಅಮೆರಿಕ

ಮಸೂದ್ ಪೆಝೆಶ್ಕಿಯನ್ |Photo Credit : AP
ನ್ಯೂಯಾರ್ಕ್: ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದರೂ ನಮ್ಮ ದೇಶವು ಮಂಡಿಯೂರಿಲ್ಲ. ನಾವು ನಮ್ಮ ತಲೆಯನ್ನು ತಗ್ಗಿಸಲಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಹೇಳಿದ್ದಾರೆ.
ಬುಧವಾರ ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು `ಶಾಲೆಗಳು, ವಿಶ್ವವಿದ್ಯಾಲಯಗಳು, ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಇರಾನ್ನ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಅಮೆರಿಕ ಮತ್ತು ಇಸ್ರೇಲ್ ಗುರಿಯಾಗಿಸಿಕೊಂಡಿವೆ. ಈ ದಾಳಿಗಳಲ್ಲಿ ಇರಾನ್ನ ವಿಜ್ಞಾನಿಗಳು, ಪುರುಷರು, ಮಹಿಳೆಯರು ಮತ್ತು ಮಕ್ಕಳು ಹತ್ಯೆಯಾಗಿದ್ದಾರೆ. ಇವೆಲ್ಲವೂ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿವೆ' ಎಂದು ಆರೋಪಿಸಿದರು.
ಪೆಝೆಶ್ಕಿಯನ್ ಅವರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ವಾಗ್ದಾಳಿ ಪ್ರಾರಂಭಿಸುತ್ತಿದ್ದಂತೆ, ಅಮೆರಿಕದ ರಾಜತಾಂತ್ರಿಕರು ಜನರಲ್ ಅಸೆಂಬ್ಲಿ ಸಭಾಂಗಣದಿಂದ ಹೊರನಡೆದರು.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ 80,000ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಇಸ್ರೇಲ್ ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ಪೆಝೆಶ್ಕಿಯನ್ ಆರೋಪಿಸಿದರು.
ನಮ್ಮನ್ನು ಭಯೋತ್ಪಾದಕರು ಎಂದು ಬಿಂಬಿಸಲಾಗುತ್ತಿದೆ. ನಾವು ದಾಳಿ ಮಾಡಲು ಅಥವಾ ಆಕ್ರಮಣ ಮಾಡಲು ಅಧಿಕಾರವನ್ನು ಬಯಸುವುದಿಲ್ಲ. ನಾವು ಪ್ರಗತಿಗಾಗಿ ಶಕ್ತಿಯನ್ನು ಬಯಸುತ್ತೇವೆಯೇ ಹೊರತು, ಶಸ್ತ್ರಾಸ್ತ್ರಗಳ ಮೂಲಕ ಸಮಾಜಗಳಿಗೆ ಬೆದರಿಕೆ ಹಾಕಲು ಅಲ್ಲ ಮತ್ತು ಭದ್ರತೆಗಾಗಿ ಸಹಕರಿಸಲು ಹಾಗೂ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳಿದರು.
ಟೆಹರಾನ್ ಸ್ವಯಂ ರಕ್ಷಣೆಗಾಗಿ ಕಾರ್ಯನಿರ್ವಹಿಸಿದೆ ಎಂದು ಸಮರ್ಥಿಸಿಕೊಂಡ ಇರಾನ್ ಅಧ್ಯಕ್ಷರು, ನಾಗರಿಕ ಜನಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದರು.






