ಅಮೆರಿಕವೇ ಇಸ್ರೇಲ್ ನ ಏಕೈಕ ಮಿತ್ರವಲ್ಲ; ಭಾರತದಲ್ಲಿ ನಮಗೆ 140 ಕೋಟಿ ಜನರ ಬೆಂಬಲವಿದೆ: ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (File Photo: PTI)
ಜೆರುಸಲೇಂ: ಅಮೆರಿಕವು ಇಸ್ರೇಲ್ ನ "ಏಕೈಕ" ಪ್ರಬಲ ಮಿತ್ರ ರಾಷ್ಟ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ತಳ್ಳಿಹಾಕಿದ್ದು, ಭಾರತವನ್ನು ಇಸ್ರೇಲ್ನ ಪ್ರಮುಖ ಅಂತರರಾಷ್ಟ್ರೀಯ ಬೆಂಬಲಿಗ ರಾಷ್ಟ್ರಗಳಲ್ಲಿ ಒಂದೆಂದು ಉಲ್ಲೇಖಿಸಿದ್ದಾರೆ.
ಅಮೆರಿಕದ ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ಜೆಡಿ ವ್ಯಾನ್ಸ್ ಅವರನ್ನು ಗೌರವಿಸುವುದಾಗಿ ಹೇಳಿದರೂ, ಅವರ ಮೌಲ್ಯಮಾಪನವನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇಸ್ರೇಲ್ಗೆ ಹಲವು ರಾಷ್ಟ್ರಗಳಿಂದ ಬೆಂಬಲ ದೊರೆಯುತ್ತಿದೆ ಎಂದು ಅವರು ಪ್ರತಿಪಾದಿಸಿದರು.
"ಮೊದಲನೆಯದಾಗಿ, ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ನಮ್ಮ ನಡುವೆ ಉತ್ತಮ ಸಂಬಂಧವಿದೆ. ಆದರೆ, ಅವರು ಹೇಳುವ ಎಲ್ಲದಕ್ಕೂ ನಾನು ಒಪ್ಪುತ್ತೇನೆ ಎಂದರ್ಥವಲ್ಲ. ಈ ವಿಚಾರವನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಡೊನಾಲ್ಡ್ ಟ್ರಂಪ್ ಅವರು ಮಹಾನ್ ನಾಯಕರು. ಶ್ವೇತಭವನದಲ್ಲಿ ನಮಗೆ ದೊರೆತ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು. ಆ ವಿಚಾರವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ" ಎಂದು ನೆತನ್ಯಾಹು ಹೇಳಿದರು.
ವ್ಯಾನ್ಸ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ವೇಳೆ ನೆತನ್ಯಾಹು ಅವರು ಭಾರತವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದರು.
"ಎರಡನೆಯದಾಗಿ, ನಮಗೆ ಭಾರತದಂತಹ ಇತರ ಕೆಲವು ಸ್ನೇಹಿತರೂ ಇದ್ದಾರೆ. ಭಾರತವು 1.4 ಶತಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅಲ್ಲಿ ನಮಗೆ ಅಪಾರ ಬೆಂಬಲವಿದೆ. ನನ್ನ ಫೇಸ್ಬುಕ್ ಖಾತೆಯಲ್ಲಿ ಭಾರತದಿಂದ ವ್ಯಕ್ತವಾಗುತ್ತಿರುವ ಬೆಂಬಲದ ಪ್ರಮಾಣದಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ" ಎಂದು ಅವರು ಹೇಳಿದರು.
ದೇಶೀಯ ರಾಜಕೀಯ ಒತ್ತಡಗಳನ್ನು ಎದುರಿಸುತ್ತಿದ್ದರೂ, ಅನೇಕ ದೇಶಗಳ ಸರ್ಕಾರಗಳು ಖಾಸಗಿಯಾಗಿ ಇಸ್ರೇಲ್ಗೆ ಬೆಂಬಲ ಮುಂದುವರಿಸಿವೆ ಎಂದು ನೆತನ್ಯಾಹು ತಿಳಿಸಿದರು.
ಕೆಲವು ಇಸ್ರೇಲಿ ಸಚಿವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್ ನೀತಿಯನ್ನು ಟೀಕಿಸಿದ್ದ ಸಂದರ್ಭದಲ್ಲಿ, ಜೂನ್ ನಲ್ಲಿ ವ್ಯಾನ್ಸ್ ಅವರು ಟ್ರಂಪ್ ಪರವಾಗಿ ಮಾತನಾಡುತ್ತಾ ಅಮೆರಿಕವೇ ಇಸ್ರೇಲ್ನ ಏಕೈಕ ಪ್ರಬಲ ಮಿತ್ರ ರಾಷ್ಟ್ರ ಎಂದು ಹೇಳಿದ್ದರು.
"ಈ ಸಂದರ್ಭದಲ್ಲಿ ಇಸ್ರೇಲ್ ರಾಷ್ಟ್ರದ ಬಗ್ಗೆ ಸಹಾನುಭೂತಿ ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರದ ಮುಖ್ಯಸ್ಥ ಡೊನಾಲ್ಡ್ ಜೆ. ಟ್ರಂಪ್" ಎಂದು ವ್ಯಾನ್ಸ್ ಹೇಳಿದ್ದರು.
ಅಲ್ಲದೆ, "ನಾನು ಇಸ್ರೇಲ್ ಸರ್ಕಾರದ ಸಚಿವ ಸಂಪುಟದಲ್ಲಿದ್ದರೆ, ಇಡೀ ಜಗತ್ತಿನಲ್ಲಿ ಉಳಿದಿರುವ ಏಕೈಕ ಪ್ರಬಲ ಮಿತ್ರ ರಾಷ್ಟ್ರದ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡುತ್ತಿರಲಿಲ್ಲ" ಎಂದು ಅವರು ಹೇಳಿದ್ದರು. ವಾಷಿಂಗ್ಟನ್ ವಿರುದ್ಧ ಬಹಿರಂಗ ಟೀಕೆಗಳನ್ನು ಮಾಡದಂತೆ ಇಸ್ರೇಲ್ ಸಚಿವ ಸಂಪುಟದ ಸದಸ್ಯರಿಗೆ ಅವರು ಎಚ್ಚರಿಕೆಯನ್ನೂ ನೀಡಿದ್ದರು.
ಈ ನಡುವೆ, ನೆತನ್ಯಾಹು ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಲೆಬನಾನ್ನಲ್ಲಿ ಇರಾನ್ ಮತ್ತು ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ವರದಿಗಳ ಬೆನ್ನಲ್ಲೇ ಈ ಭೇಟಿ ನಡೆಯಲಿರುವುದು ಗಮನಾರ್ಹವಾಗಿದೆ.






