ಅರ್ಷದ್ ನದೀಂ ಮತ್ತು ನಾನು ಆತ್ಮೀಯ ಸ್ನೇಹಿತರೇನೂ ಅಲ್ಲ: ನೀರಜ್ ಚೋಪ್ರಾ ಹೇಳಿಕೆ
“ಪಹಲ್ಗಾಮ್ ಘಟನೆಯ ಬಳಿಕ ಎಲ್ಲವೂ ಮೊದಲಿನಂತಿರಲು ಸಾಧ್ಯವಿಲ್ಲ”

PC: PTI
ದೋಹಾ: “ಅರ್ಷದ್ ನದೀಂ ಮತ್ತು ನಾನು ಮೊದಲಿನಿಂದಲೂ ಆತ್ಮೀಯ ಸ್ನೇಹಿತರಲ್ಲ. ಯಾರಾದರೂ ನನ್ನೊಂದಿಗೆ ಗೌರವದಿಂದ ಮಾತನಾಡಿದರೆ, ನಾನೂ ಅವರೊಂದಿಗೆ ಗೌರವದಿಂದ ಮಾತನಾಡುತ್ತೇನೆ. ಪಹಲ್ಗಾಮ್ ಘಟನೆಯ ಬಳಿಕ ಎಲ್ಲವೂ ಮೊದಲಿನಂತಿರಲು ಸಾಧ್ಯವಿಲ್ಲ”, ಎಂದು ಜಾವೆಲಿನ್ ಪಟು ನೀರಜ್ ಚೋಪ್ರಾ ಹೇಳಿದ್ದಾರೆ.
ದೋಹಾದಲ್ಲಿ ಶುಕ್ರವಾರ ಮೇ 16ರ ರಿಂದ ನಡೆಯಲಿರುವ ಡೈಮಂಡ್ ಲೀಗ್ ನ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ, ತಮ್ಮ ಮತ್ತು ಪಾಕಿಸ್ತಾನದ ಜಾವೆಲಿನ್ ಪಟು ಅರ್ಷದ್ ನದೀಮ್ ನಡುವಿನ ಸ್ನೇಹದ ಕುರಿತು ಅವರು ಮಾತನಾಡಿದರು.
ಅಂತರಾಷ್ಟ್ರೀಯ ಅತ್ಲೆಟಿಕ್ ಅಂಗಣದಲ್ಲಿ 2016ರ ರಿಂದ ಜೊತೆಯಾಗಿ ಭಾಗವಹಿಸುತ್ತಿರುವ ನೀರಜ್ – ಅರ್ಷದ್ ಆತ್ಮೀಯರಾಗಿದ್ದರು. ಆದರೆ ಭಾರತ ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದ ನಂತರ ಇಬ್ಬರ ಸ್ನೇಹದಲ್ಲೂ ಬಿರುಕು ಮೂಡಿದೆ ಎನ್ನಲಾಗಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಮೇ 24 ರಿಂದ ಆರಂಭವಾಗಬೇಕಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಗೆ ಅರ್ಷದ್ ನದೀಮ್ ರನ್ನು ನೀರಜ್ ಚೋಪ್ರಾ ಆಹ್ವಾನಿಸಿದ್ದರು. ಈ ಕಾರಣಕ್ಕೆ ನೀರಜ್ ಚೋಪ್ರಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನೀರಜ್ ಚೋಪ್ರಾ, ಪಹಲ್ಗಾಮ್ ದಾಳಿಗೂ ಮುನ್ನವೇ ಅರ್ಷದ್ ನದೀಂಗೆ ಆಹ್ವಾನ ನೀಡಲಾಗಿತ್ತು ಎಂದು ಹೇಳಿದ್ದರು.
ಕಳೆದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅರ್ಷದ್ ನದೀಂ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ನೀರಜ್ ಚೋಪ್ರಾ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದ್ದರು.
7-8 ವರ್ಷಗಳಿಂದ ಹಳೇ ಜಾವೆಲಿನ್ ಬಳಸುತ್ತಿದ್ದ ಅರ್ಷದ್ ನದೀಂಗೆ ಪ್ಯಾರಿಸ್ ಒಲಿಂಪಿಕ್ಸ್ ಗೂ ಮುನ್ನ ನೀರಜ್ ಚೋಪ್ರಾ ಹೊಸ ಜಾವೆಲಿನ್ ನೀಡಿದ್ದರು. ಅರ್ಷದ್ ಬಳಿಯಿದ್ದ ಜಾವೆಲಿನ್ ಬಳಸುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ನೀರಜ್ ಚಾಚಿದ್ದ ಕ್ರೀಡಾ ಸ್ಪೂರ್ತಿಯು ಅರ್ಷದ್ ಕ್ರೀಡಾ ಜೀವನವನ್ನು ಒಲಿಂಪಿಕ್ಸ್ ಚಿನ್ನದಂಗಳಕ್ಕೆ ಕೊಂಡೊಯ್ದಿತ್ತು.







