"ಇರಾನ್ ಮೇಲೆ ದಾಳಿ ಮಾಡಿದರೆ ಅಮೆರಿಕಾಗೆ ಮರೆಯಲಾಗದಂತಹ ಪ್ರತಿಕ್ರಿಯೆ ನೀಡುತ್ತೇವೆ" : ಖಾರ್ಗ್ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಟ್ರಂಪ್ ಹೇಳಿಕೆ ಬೆನ್ನಲ್ಲೆ ಇರಾನ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್,ಜೂ.11: ಯಾವುದೇ ‘ತಪ್ಪು ಲೆಕ್ಕಾಚಾರ’ದೊಂದಿಗೆ ಇರಾನ್ ವಿರುದ್ಧ ಅಮೆರಿಕವು ದಾಳಿ ನಡೆಸಿದಲ್ಲಿ ಅದಕ್ಕೆ ಇತಿಹಾಸದಲ್ಲಿ ದಾಖಲಾಗುವಂತಹ ರೀತಿಯಲ್ಲಿ ‘ಪ್ರತಿಕ್ರಿಯೆ’ ನೀಡಲಾಗುವುದು ಎಂದು ಇರಾನ್ ಸಂಸತ್ನ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ಸಮಿತಿಯ ವರಿಷ್ಠ ಇಬ್ರಾಹೀಂ ಆಝೀಜಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮೇಲೆ ಪ್ರಬಲವಾದ ದಾಳಿ ನಡೆಸುವುದಾಗಿ ಹಾಗೂ ಖಾರ್ಗ್ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಬೆದರಿಕೆ ಹಾಕಿದ ಬೆನ್ನಲ್ಲೇ ಇಬ್ರಾಹೀ ಅಝೀಝಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಅಧ್ಯಕ್ಷರು ಭ್ರಮಾಧೀನರಾಗಿದ್ದಾರೆ ಮತ್ತು ಖಾರ್ಗ್ ದ್ವೀಪದ ರಕ್ಷಣೆಗೆ ಸಂಬಂಧಿಸಿ ಇರಾನ್ನ ಸಮರ ಸಾಮರ್ಥ್ಯವು ಅತ್ಯುನ್ನತವಾಗಿದೆ. ‘‘ ದೇಶದ ಸಶಸ್ತ್ರ ಪಡೆಗಳ ಸಮರಸನ್ನದ್ಧತೆಯು ಅತ್ಯುನ್ನತ ಮಟ್ಟದಲ್ಲಿದೆ ಹಾಗೂ ಇರಾನ್ನ ಎಲ್ಲಾ ಭಾಗಗಳಲ್ಲಿ ಬಲವಾದ ಭದ್ರತೆಯನ್ನು ಖಾತರಿಪಡಿಸಲಾಗಿದೆ’’ ಎಂದು ಅಝೀಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.




