ನಮಗೆ ಸಂಬಂಧವೇ ಇಲ್ಲದ ಯುದ್ಧದಲ್ಲಿ ನಾವು ಮೂಗು ತೂರಿಸುವುದಿಲ್ಲ: ಭಾರತ-ಪಾಕಿಸ್ತಾನ ಬಿಕ್ಕಟ್ಟಿಗೆ ಅಮೆರಿಕದ ಉಪಾಧ್ಯಕ್ಷ ವಾನ್ಸ್ ಪ್ರತಿಕ್ರಿಯೆ

ಜೆ.ಡಿ.ವಾನ್ಸ್ | PC : PTI
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಗೊಂಡಿರುವ ಉದ್ವಿಗ್ನತೆಯ ನಡುವೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರು,ಪರಮಾಣು ಶಕ್ತ ನೆರೆಹೊರೆ ದೇಶಗಳ ನಡುವೆ ಬಿಕ್ಕಟ್ಟು ನಿವಾರಣೆಗೆ ತನ್ನ ದೇಶವು ಒತ್ತು ನೀಡುತ್ತದೆ, ಆದರೆ ನೇರವಾಗಿ ಮಧ್ಯಪ್ರವೇಶವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
‘ಮೂಲಭೂತವಾಗಿ ನಮಗೆ ಸಂಬಂಧವೇ ಇಲ್ಲದ ಯುದ್ಧದಲ್ಲಿ ನಾವು ಮೂಗು ತೂರಿಸುವುದಿಲ್ಲ’ ಎಂದು ಶುಕ್ರವಾರ ಟಿವಿ ಸಂದರ್ಶನದಲ್ಲಿ ತಿಳಿಸಿದ ವಾನ್ಸ್,‘ಪರಮಾಣು ಶಕ್ತಿಗಳು ಪರಸ್ಪರ ಬೃಹತ್ ಸಂಘರ್ಷದಲ್ಲಿ ತೊಡಗಿದರೆ ನಾವು ಸಹಜವಾಗಿಯೇ ಕಳವಳಗೊಳ್ಳುತ್ತೇವೆ’ ಎಂದು ಹೇಳಿದರು.
ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ತನ್ನ ಕುಟುಂಬದೊಂದಿಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ವಾನ್ಸ್ ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡರಾದರೂ,‘ಅದು ಅಮೆರಿಕದ ನಿಯಂತ್ರಣವನ್ನು ಮೀರಿದ ಪ್ರಾದೇಶಿಕ ವಿವಾದವಾಗಿದೆ. ನಾವು ಈ ದೇಶಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮೂಲಭೂತವಾಗಿ ಭಾರತವು ಪಾಕಿಸ್ತಾನದ ಮೇಲೆ ಹಿಡಿತವನ್ನು ಹೊಂದಿದೆ. ಪಾಕಿಸ್ತಾನವು ಭಾರತಕ್ಕೆ ಪ್ರತಿಕ್ರಿಯಿಸಿದೆ. ನಾವು ಮಾಡಬಹುದಾದದ್ದು ಏನೆಂದರೆ ಉದ್ವಿಗ್ನತೆಯನ್ನು ಸ್ವಲ್ಪ ಮಟ್ಟಿಗೆ ಶಮನಿಸುವಂತೆ ಈ ದೇಶಗಳನ್ನು ಉತೇಜಿಸಲು ಪ್ರಯತ್ನಿಸುವುದು’ ಎಂದು ಹೇಳಿದರು.
‘ಅಮೆರಿಕವು ಈ ಸಂಘರ್ಷದ ಬಗ್ಗೆ ಕಳವಳಗೊಂಡಿದೆ,ಉಭಯ ದೇಶಗಳ ಮೇಲೆ ಷರತ್ತುಗಳನ್ನು ಹೇರುವ ಉದ್ದೇಶವನ್ನು ಅದು ಹೊಂದಿಲ್ಲ. ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿರಿಸುವಂತೆ ನಾವು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಈ ವಿಷಯದಲ್ಲಿ ನಾವು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತೇವೆ ’ ಎಂದು ವಾನ್ಸ್ ಹೇಳಿದರು.
‘ಇದು ವ್ಯಾಪಕ ಪ್ರಾದೇಶಿಕ ಯುದ್ಧವಾಗಿ ಅಥವಾ ಪರಮಾಣು ಸಂಘರ್ಷವಾಗಿ ಹರಡುವುದಿಲ್ಲ ಎಂಬ ಆಶಯ ಮತ್ತು ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಆದರೆ ನಾವು ಖಂಡಿತವಾಗಿಯೂ ಈ ಬಗ್ಗೆ ಚಿಂತಿತರಾಗಿದ್ದೇವೆ’ ಎಂದ ವಾನ್ಸ್,‘ಇದು ಪರಮಾಣು ಯುದ್ಧವಾಗದಂತೆ ನೋಡಿಕೊಳ್ಳುವುದು ರಾಜತಾಂತ್ರಿಕತೆಯ ಮತ್ತು ಉಭಯ ದೇಶಗಳ ಶಾಂತಿಪ್ರಿಯ ನಾಯಕರ ಕೆಲಸವಾಗಿದೆ ಎಂದು ನಾನು ಭಾವಿಸಿದ್ದೇನೆ. ಪರಮಾಣು ಯುದ್ಧ ಸಂಭವಿಸಿದರೆ ಖಂಡಿತವಾಗಿಯೂ ಅದು ವಿನಾಶಕಾರಿಯಾಗುತ್ತದೆ. ಆದರೆ ಅದು ಸಂಭವಿಸುತ್ತದೆ ಎಂದು ಸದ್ಯಕ್ಕೆ ನಾವು ಭಾವಿಸಿಲ್ಲ’ ಎಂದು ಹೇಳಿದರು.