ದುರ್ಬಲ ದೇಶಗಳಿಗೆ ಯುದ್ಧದ ಹೊರೆ ಬೀಳಬಾರದು : `ಜಾಗತಿಕ ದಕ್ಷಿಣ' ಪರ ಧ್ವನಿ ಎತ್ತಿದ ಪ್ರಧಾನಿ ಮೋದಿ

ನರೇಂದ್ರ ಮೋದಿ | Photo Credit : PTI
ಪ್ಯಾರಿಸ್, ಜೂ.17: ಫ್ರಾನ್ಸ್ನ ಎವಿಯನ್ ನಗರದಲ್ಲಿ ಬುಧವಾರ ನಡೆದ ಜಿ7 `ಔಟ್ರೀಚ್ ಶೃಂಗಸಭೆ'ಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿಶೀಲ ರಾಷ್ಟ್ರಗಳು ಆರ್ಥಿಕ ಮತ್ತು ಸಾಮಾಜಿಕ ಆಘಾತಗಳನ್ನು ಎದುರಿಸಲು ಬಲವಾದ ಜಾಗತಿಕ ಬೆಂಬಲ ವ್ಯವಸ್ಥೆಗಳನ್ನು ರೂಪಿಸುವಂತೆ ಒತ್ತಾಯಿಸಿದರು.
`ಅತ್ಯಂತ ದುರ್ಬಲ ದೇಶಗಳನ್ನು ಬಿಕ್ಕಟ್ಟುಗಳ ಹೊರೆಯನ್ನು ಏಕಾಂಗಿಯಾಗಿ ಹೊರಲು ಬಿಡಬಾರದು. ಅಭಿವೃದ್ಧಿಶೀಲ ರಾಷ್ಟ್ರಗಳು ಇಂತಹ ಆಘಾತಗಳನ್ನು ತಡೆದುಕೊಳ್ಳಲು ಮತ್ತು ತಮ್ಮ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವಂತಹ ಬೆಂಬಲ ಕಾರ್ಯವಿಧಾನಗಳನ್ನು ನಮ್ಮ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಅಭಿವೃದ್ಧಿಪಡಿಸಬೇಕು' ಎಂದು ಪ್ರಧಾನಿ ಮೋದಿ ಹೇಳಿದರು.
`ಎಲ್ಲರಿಗೂ ಸಮತೋಲಿತ, ಹಂಚಿಕೆಯ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಪುನಶ್ಚೇತನಗೊಳಿಸುವುದು' ಎಂಬ ವಿಷಯದ ಕುರಿತಾದ ಅಧಿವೇಶನದಲ್ಲಿ ಮಾತನಾಡಿದ ಮೋದಿ `ಬೆಳವಣಿಗೆಯ ಕಲ್ಪನೆಯು ಸಾಂಪ್ರದಾಯಿಕ ಆರ್ಥಿಕ ಸೂಚಕಗಳನ್ನು ಮೀರಿರಬೇಕು. ಬೆಳವಣಿಗೆಯ ವಿಷಯ ಬಂದಾಗ, ಪ್ರಶ್ನೆಯು ಜಿಡಿಪಿ ಅಥವಾ ವ್ಯಾಪಾರದ ಅಂಕಿ-ಅಂಶಗಳ ಬಗ್ಗೆ ಇರಬಾರದು. ಬೆಳವಣಿಗೆ ಯಾರಿಗಾಗಿ, ಯಾರೊಂದಿಗೆ ಮತ್ತು ಯಾವ ದಿಕ್ಕಿನಲ್ಲಿ ಎಂಬುದು ನಿಜವಾದ ಪ್ರಶ್ನೆಯಾಗಿದೆ. ಜಿ7 ರ ಬಂಡವಾಳ, ಭಾರತದ ಪ್ರತಿಭೆ ಮತ್ತು `ಜಾಗತಿಕ ದಕ್ಷಿಣ' ದೇಶಗಳ ಮಾಲೀಕತ್ವವನ್ನು ಸಂಯೋಜಿಸುವ ಮೂಲಕ, ನಾವು ಸಂಪರ್ಕ ಮತ್ತು ವ್ಯಾಪಾರವನ್ನು ವೇಗಗೊಳಿಸಲು ಅಂತಾರಾಷ್ಟ್ರೀಯ ಕ್ರೋಡೀಕರಣ ಪಾಲುದಾರಿಕೆ ಸ್ಥಾಪಿಸುವುದನ್ನು ಪರಿಗಣಿಸಬಹುದು' ಎಂದು ಒತ್ತಿಹೇಳಿದರು.
2023ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಅಂತಿಮಗೊಳಿಸಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್(ಐಎಂಇಸಿ) ಉಪಕ್ರಮವನ್ನು ಉಲ್ಲೇಖಿಸಿದ ಅವರು, ಜಾಗತಿಕ ಸಂಪರ್ಕ ಯೋಜನೆಗಳಲ್ಲಿ ಆಳವಾದ ಸಹಕಾರಕ್ಕಾಗಿ ಪ್ರತಿಪಾದಿಸಿದರು. ಸ್ಲೋವಾಕಿಯಾಕ್ಕೆ ಎರಡು ದಿನಗಳ ಭೇಟಿಯ ನಂತರ, ಪ್ರಧಾನಿ ಮೋದಿ ಅವರು ಫ್ರಾನ್ಸ್ನಲ್ಲಿ ನಡೆದ `ಜಿ7 ಔಟ್ರೀಚ್' ಅಧಿವೇಶನದಲ್ಲಿ ಅತಿಥಿ ದೇಶದ ಆಹ್ವಾನಿತರಾಗಿ ಭಾಗವಹಿಸಿದ್ದರು.






