ಪಶ್ಚಿಮ ಏಷ್ಯಾ ಸಂಘರ್ಷ | ರಿಯಾದ್, ದಮ್ಮಾಮ್ ಗೆ ಏರ್ ಇಂಡಿಯಾ ವಿಮಾನ ರದ್ದು ನ. 7ರವರೆಗೆ ವಿಸ್ತರಣೆ
ಇಂಡಿಗೋ, ಆಕಾಸ ಏರ್ ವಿಮಾನಗಳೂ ರದ್ದು

ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಗಲ್ಫ್ ಪ್ರದೇಶದ ವಿಮಾನ ನಿಲ್ದಾಣಗಳ ಮೇಲಿನ ದಾಳಿಗಳ ಹಿನ್ನೆಲೆಯಲ್ಲಿ, ಸೌದಿ ಅರೇಬಿಯದ ನಗರಗಳಿಗೆ ವಿಮಾನ ಸೇವೆಗಳ ರದ್ದತಿಯನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ವಿಸ್ತರಿಸಿವೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ರಿಯಾದ್ ಹಾಗೂ ದಮ್ಮಾಮ್ ಗೆ ವಿಮಾನಗಳ ರದ್ದತಿಯನ್ನು ನವೆಂಬರ್ 7ರವರೆಗೆ ವಿಸ್ತರಿಸಿದ್ದು, ಜಿದ್ದಾಗೆ ಸೇವೆಗಳನ್ನು ಅಕ್ಟೋಬರ್ 31ರವರೆಗೆ ಸ್ಥಗಿತಗೊಳಿಸಿವೆ.
‘ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಿಯಾದ್ ಮತ್ತು ದಮ್ಮಾಮ್ ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳ ಸೇವೆಯನ್ನು 2026ರ ನವೆಂಬರ್ 7ರವರೆಗೆ ಸ್ಥಗಿತಗೊಳಿಸಲಾಗಿದೆ. ಜಿದ್ದಾಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳ ಸೇವೆ 2026ರ ಅಕ್ಟೋಬರ್ 31ರವರೆಗೆ ಸ್ಥಗಿತಗೊಳ್ಳಲಿದೆ’ ಎಂದು ಏರ್ ಇಂಡಿಯಾ ಶನಿವಾರ ಎಕ್ಸ್ ನಲ್ಲಿ ತಿಳಿಸಿದೆ.
ಅಕ್ಟೋಬರ್ 24ರಂದು ಅಥವಾ ಅದಕ್ಕೂ ಮೊದಲು ದೃಢೀಕೃತ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮರುಬುಕಿಂಗ್ ಗೆ ಹೊಂದಿಕೊಳ್ಳುವ ಆಯ್ಕೆಗಳನ್ನು ನೀಡಲಾಗುವುದು. ಬುಕಿಂಗ್ ರದ್ದುಗೊಳಿಸಿ ಪೂರ್ಣ ಮರುಪಾವತಿ ಪಡೆಯುವ ಅವಕಾಶವೂ ಇದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದಕ್ಕೂ ಮೊದಲು, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸೌದಿ ಅರೇಬಿಯಾಕ್ಕೆ ತಮ್ಮ ವಿಮಾನ ಸೇವೆಗಳನ್ನು ಅಕ್ಟೋಬರ್ 24ರವರೆಗೆ ರದ್ದುಗೊಳಿಸಿದ್ದವು.
ಇದೇ ವೇಳೆ, ಇಂಡಿಗೊ ಕೂಡ ಜಿದ್ದಾ, ದಮ್ಮಾಮ್ ಮತ್ತು ಮದೀನಾಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳ ರದ್ದತಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ. ಎಚ್ಚರಿಕೆಯ ಮೌಲ್ಯಮಾಪನದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಶನಿವಾರ ತಿಳಿಸಿದೆ.
ಶುಕ್ರವಾರ, ರಿಯಾದ್ ಗೆ ವಿಮಾನ ಸೇವೆಗಳನ್ನು ಅಕ್ಟೋಬರ್ 31ರವರೆಗೆ ರದ್ದುಗೊಳಿಸುವುದಾಗಿ ಇಂಡಿಗೊ ಘೋಷಿಸಿತ್ತು. ಜಿದ್ದಾ, ದಮ್ಮಾಮ್ ಮತ್ತು ಮದೀನಾಗೆ ವಿಮಾನಗಳ ರದ್ದತಿಯನ್ನು ಅಕ್ಟೋಬರ್ 27ರವರೆಗೆ ವಿಸ್ತರಿಸಿತ್ತು.
ಅಕಾಸಾ ಏರ್ ಕೂಡ ವಿಮಾನಗಳ ರದ್ದತಿ ಅವಧಿಯನ್ನು ವಿಸ್ತರಿಸಿದೆ. ರಿಯಾದ್ಗೆ ವಿಮಾನ ಸೇವೆಗಳನ್ನು ನವೆಂಬರ್ 30ರವರೆಗೆ ಹಾಗೂ ಜಿದ್ದಾ ವಿಮಾನಗಳ ಸಂಚಾರವನ್ನು ನವೆಂಬರ್ 10ರವರೆಗೆ ಸ್ಥಗಿತಗೊಳಿಸಿರುವುದಾಗಿ ಶುಕ್ರವಾರ ತಿಳಿಸಿದೆ.






