ಅಮೆರಿಕದ ನಿರೀಕ್ಷೆಗೆ ತಕ್ಕಂತೆ ಒಪ್ಪಂದದ ಅನುಷ್ಠಾನ ನಡೆಯದಿದ್ದರೆ ಇರಾನ್ ಮೇಲೆ ಮತ್ತೆ ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ಎವಿಯನ್-ಲೆಸ್-ಬೈನ್ಸ್ (ಫ್ರಾನ್ಸ್): ಇತ್ತೀಚೆಗೆ ಮಧ್ಯಸ್ಥಿಕೆ ವಹಿಸಿ ರೂಪಿಸಲಾದ ಮಧ್ಯಂತರ ಒಪ್ಪಂದದ ಷರತ್ತುಗಳನ್ನು ಇರಾನ್ ಪಾಲಿಸದಿದ್ದರೆ ಅಥವಾ ಒಪ್ಪಂದದ ಅನುಷ್ಠಾನ ಅಮೆರಿಕದ ನಿರೀಕ್ಷೆಗೆ ತಕ್ಕಂತೆ ನಡೆಯದಿದ್ದರೆ, ಇರಾನ್ ವಿರುದ್ಧ ಮತ್ತೆ ಮಿಲಿಟರಿ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಫ್ರಾನ್ಸ್ನ ಎವಿಯನ್-ಲೆಸ್-ಬೈನ್ಸ್ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರೂಪುಗೊಂಡಿರುವ ಚೌಕಟ್ಟು ಅಂತಿಮ ಒಪ್ಪಂದವಲ್ಲ. ಅದು ಕೇವಲ ತಿಳುವಳಿಕೆ ಒಪ್ಪಂದ (MOU) ಎಂದು ಹೇಳಿದರು. ಅಲ್ಲದೆ, ಈ ಒಪ್ಪಂದದ ಭಾಗವಾಗಿ ಇರಾನ್ ಗೆ ತಕ್ಷಣದ ನಿರ್ಬಂಧ ಸಡಿಲಿಕೆ ಅಥವಾ ಆರ್ಥಿಕ ಪರಿಹಾರ ನೀಡಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಒಪ್ಪಂದವು ವಿಫಲವಾದರೆ ಅಥವಾ ಇರಾನ್ ತನ್ನ ಬದ್ಧತೆಗಳನ್ನು ಪಾಲಿಸದಿದ್ದರೆ, ಅಮೆರಿಕ ಮತ್ತೆ ಮಿಲಿಟರಿ ಕ್ರಮಕ್ಕೆ ಮುಂದಾಗಲು ಸಿದ್ಧವಿದೆ. ‘ಒಪ್ಪಂದದ ಷರತ್ತುಗಳನ್ನು ಇರಾನ್ ಪಾಲಿಸದಿದ್ದರೆ ಅಥವಾ ಒಪ್ಪಂದದ ಅನುಷ್ಠಾನ ತೃಪ್ತಿಕರವಾಗದಿದ್ದರೆ, ಅಮೆರಿಕ ಮತ್ತೆ ಸೈನಿಕ ಕ್ರಮ ಕೈಗೊಳ್ಳಲಿದೆ’ ಎಂದು ಟ್ರಂಪ್ ಅವರು ಎಚ್ಚರಿಸಿದರು.
ಈ ಚೌಕಟ್ಟಿನ ಒಪ್ಪಂದವನ್ನು ‘ಬಹಳ ಬಲವಾದ ಒಪ್ಪಂದ’ ಎಂದು ಬಣ್ಣಿಸಿದ ಟ್ರಂಪ್, ಇದು ಜಾಗತಿಕ ಹಣಕಾಸು ಮಾರುಕಟ್ಟೆಗಳಿಗೆ ಅನುಕೂಲಕರವಾಗಲಿದೆ ಎಂದು ಪ್ರತಿಪಾದಿಸಿದರು. ‘ಮಾರುಕಟ್ಟೆಯಷ್ಟು ಬುದ್ಧಿವಂತವಾದುದು ಮತ್ತೊಂದಿಲ್ಲ. ಈ ಒಪ್ಪಂದವನ್ನು ಹಣಕಾಸು ಮಾರುಕಟ್ಟೆಗಳು ಸಕಾರಾತ್ಮಕವಾಗಿ ಸ್ವಾಗತಿಸಲಿವೆ’ ಎಂದು ಹೇಳಿದರು.
ಒಪ್ಪಂದವು ವಿಫಲವಾದರೆ ಅದರ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೂ ಬೀಳಲಿದೆ. ಪರ್ಯಾಯ ಪರಿಸ್ಥಿತಿ ಎಂದರೆ ವಿಶ್ವಾದ್ಯಂತ ಆರ್ಥಿಕ ಹಿಂಜರಿತ’ ಎಂದು ಅಮೆರಿಕದ ಅಧ್ಯಕ್ಷ ಹೇಳಿದರು.
ಇದೇ ವೇಳೆ, ಬುಧವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವುದನ್ನು ಉಲ್ಲೇಖಿಸಿದ ಟ್ರಂಪ್, ಮುಂದಿನ ದಿನಗಳಲ್ಲಿ ತೈಲದ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ‘ಯುದ್ಧ ಆರಂಭವಾಗುವ ಮೊದಲು ಇದ್ದ ಮಟ್ಟಕ್ಕಿಂತಲೂ ತೈಲದ ಬೆಲೆಗಳು ಕಡಿಮೆಯಾಗಬಹುದುʼ ಎಂದು ಅಭಿಪ್ರಾಯಪಟ್ಟರು.






