ಐಸ್ಕ್ರೀಂ, ಚಾಕೊಲೇಟ್ಗೆ ತಟ್ಟಿದ ಪಶ್ಚಿಮ ಏಷ್ಯಾ ಯುದ್ಧದ ಬಿಸಿ!

ಸಾಂದರ್ಭಿಕ ಚಿತ್ರ Photo: freepik
ಮುಂಬೈ: ಐಸ್ಕ್ರೀಂ, ಆಪ್ಯಾಯಮಾನವಾದ ಚಾಕೊಲೇಟ್ ಅಥವಾ ಸಿಹಿತಿನಿಸುಗಳು ಬೇಸಿಗೆಯ ಸತ್ಕಾರಕ್ಕೆ ಹೆಚ್ಚು ಆದ್ಯತೆಯ ತಿನಸುಗಳು. ಆದರೆ ಪಶ್ಚಿಮ ಏಷ್ಯಾದ ಯುದ್ಧದ ಬಿಸಿ ಇದೀಗ ಈ ಉದ್ಯಮಕ್ಕೂ ತಟ್ಟಿದ್ದು, ಪೂರೈಕೆ ಸರಣಿ ವ್ಯತ್ಯಯದಿಂದ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿದ್ದು, ಗ್ರಾಹಕರ ಜೇಬಿಗೂ ಇದು ತುಟ್ಟಿಯಾಗಿ ಪರಿಣಮಿಸಲಿದೆ.
ಅಮೆರಿಕಾ–ಇರಾನ್ ಸಂಘರ್ಷ ಐಸ್ಕ್ರೀಂ ಹಾಗೂ ಚಾಕೊಲೇಟ್ ಉದ್ಯಮಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಮುಖ್ಯವಾಗಿ ಇವುಗಳ ಸ್ವಾದ ಹಾಗೂ ಪರಿಮಳಕ್ಕೆ ಬೇಕಾಗುವ ಹಣ್ಣು ಮತ್ತು ಬೀಜಗಳ ದರ ಗಗನಕ್ಕೇರಿದೆ. ಇದರಿಂದಾಗಿ ಐಸ್ಕ್ರೀಂ ಹಾಗೂ ಚಾಕೊಲೇಟ್ ಉತ್ಪಾದಕರ ಲಾಭ ಗಣನೀಯವಾಗಿ ಕುಸಿದಿದೆ. ಅತ್ಯಧಿಕ ಬೇಡಿಕೆಯ ಸೀಸನ್ನಲ್ಲಿ ಕೆಲ ಕಂಪನಿಗಳು ಇನ್ನೂ ಬೆಲೆಗಳನ್ನು ಹೆಚ್ಚಿಸಿಲ್ಲ. ಯುದ್ಧಪೂರ್ವ ಮಟ್ಟಕ್ಕೆ ಹೋಲಿಸಿದರೆ ಬೀಜ–ಒಣಹಣ್ಣುಗಳ ದರ ಶೇಕಡಾ 15 ರಿಂದ 22ರಷ್ಟು ಏರಿಕೆಯಾಗಿದೆ ಎಂದು ಉದ್ಯಮ ಪ್ರಮುಖರೊಬ್ಬರು ತಿಳಿಸಿದ್ದಾರೆ. ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ಪ್ಯಾಕೇಜಿಂಗ್ ದರದಿಂದಾಗಿ ಒಟ್ಟಾರೆ ವೆಚ್ಚ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ಕೆಲ ಅಗತ್ಯ ಸಾಧನಗಳಾದ ಒಣಹಣ್ಣು ಮತ್ತು ಕೋಕೋ ಪೂರೈಕೆ ಕೂಡ ಬಿಗಿಯಾಗುತ್ತಿದ್ದು, ಸಾಗಾಣಿಕೆಗೆ ಹೆಚ್ಚಿನ ಅವಧಿ ತಗುಲುತ್ತಿದೆ. ಇಂಥ ಹಲವು ಅಗತ್ಯ ವಸ್ತುಗಳು ಆಮದು ಮತ್ತು ಸಮುದ್ರ ಮಾರ್ಗದ ಪೂರೈಕೆ ಸರಣಿಯನ್ನು ಅವಲಂಬಿಸಿವೆ,” ಎನ್ನುತ್ತಾರೆ ಈಗಾಗಲೇ ಶೇಕಡಾ 10ರಷ್ಟು ದರ ಹೆಚ್ಚಿಸಿರುವ ನ್ಯಾಚುರಲ್ಸ್ ಐಸ್ಕ್ರೀಂ ನಿರ್ದೇಶಕ ಸಿದ್ಧಾಂತ ಕಾಮತ್.
ಮದರ್ ಡೈರಿ ಕೂಡ ಜಾಗತಿಕ ಸರಕು ಸಾಗಾಣಿಕೆ ದರ ಹೆಚ್ಚಳದಿಂದಾಗಿ ಆಯ್ದ ಐಸ್ಕ್ರೀಂಗಳ ಬೆಲೆಯನ್ನು ಹೆಚ್ಚಿಸಿದೆ ಎಂದು ಎಂಡಿ ಜಯತೀರ್ಥ ಚಾರಿ ಹೇಳಿದ್ದಾರೆ.
ಬೇಸಿಗೆ ಸೀಸನ್ ಆರಂಭದ ವೇಳೆಗೆ ಯುದ್ಧ ಆರಂಭವಾದ ಹಿನ್ನೆಲೆಯಲ್ಲಿ ಕಂಪನಿಗಳಿಗೆ ಸ್ವಾದಗಳಲ್ಲಿ ಹೆಚ್ಚಿನ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಹಾಗೂ ಒಣಹಣ್ಣು ಮತ್ತು ಬೀಜಗಳ ಗುಣಮಟ್ಟಕ್ಕೆ ಗಮನ ಕೊಡಲು ಸಾಧ್ಯವಾಗಿಲ್ಲ ಎಂದು ದಿನ್ಶಾಸ್ ಡೈರಿ ಫುಡ್ಸ್ನ ಝೆರ್ವಿನ್ ರಾಣಾ ತಿಳಿಸಿದ್ದಾರೆ. ಲಾಭ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಗರಿಷ್ಠ ಮಾರಾಟ ಬೆಲೆ ಹೆಚ್ಚಳ ಅನಿವಾರ್ಯ ಎಂದು ಅವರು ವಿವರಿಸಿದ್ದಾರೆ. ಪಾಸ್ಕಟಿ ಬ್ರ್ಯಾಂಡ್ ಚಾಕೊಲೇಟ್ಗಳ ದರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 75ರಷ್ಟು ಏರಿಕೆಯಾಗಿದೆ.






