ಪಶ್ಚಿಮದಂಡೆ: ಇಸ್ರೇಲ್ ದಾಳಿಯಲ್ಲಿ 5 ಮಂದಿ ಮೃತ್ಯು ; ಇಬ್ಬರಿಗೆ ಗಾಯ

ಸಾಂದರ್ಭಿಕ ಚಿತ್ರ | PC : aljazeera.com
ರಮಲ್ಲಾ: ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲ್ ಸೇನೆ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ಫೆಲೆಸ್ತೀನ್ನ ಆರೋಗ್ಯ ಇಲಾಖೆ ರವಿವಾರ ಹೇಳಿದೆ.
ಜೆನಿನ್ ನಗರದಲ್ಲಿ ನಡೆದ ದಾಳಿಯಲ್ಲಿ 16 ವರ್ಷದ ಯುವಕ ಮೃತಪಟ್ಟು ಇತರ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಖಬಾತಿಯಾ ನಗರದಲ್ಲಿ ಕಾರೊಂದನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಧ್ಯ ಜೆನಿನ್ನಲ್ಲಿ ನಡೆದ ಮೂರನೇ ದಾಳಿಯಲ್ಲಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜೆನಿನ್ ನಗರದ ಗವರ್ನರ್ ಹೇಳಿದ್ದಾರೆ.
ಖಬಾತಿಯಾ ಪ್ರದೇಶದಲ್ಲಿ ಕಾರಿನ ಮೇಲೆ ಡ್ರೋನ್ ದಾಳಿ ನಡೆಸಿರುವುದನ್ನು ಇಸ್ರೇಲಿ ಮಿಲಿಟರಿ ದೃಢಪಡಿಸಿದೆ.
ಪಶ್ಚಿಮದಂಡೆಯ ಉತ್ತರ ಪ್ರಾಂತದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿ, ಖಬಾತಿಯಾ ಪ್ರದೇಶದಲ್ಲಿ ಭಯೋತ್ಪಾದಕರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ನಮ್ಮ ಯುದ್ಧವಿಮಾನ ದಾಳಿ ನಡೆಸಿದೆ. ಜೆನಿನ್ ಪ್ರದೇಶದಲ್ಲೂ ಸಶಸ್ತ್ರ ಹೋರಾಟಗಾರರನ್ನು ಗುರಿಯಾಗಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.





