ಪಶ್ಚಿಮದಂಡೆ: ಇಸ್ರೇಲಿ ಯೋಧರ ಮೇಲೆ ದಾಳಿ ಮಾಡಿದ ವ್ಯಕ್ತಿಯ ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ
ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯ ಮಿಲಿಟರಿ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯನ್ನು ಗುಂಡಿಕ್ಕಿ ಸಾಯಿಸಲಾಗಿದೆ ಎಂದು ಇಸ್ರೇಲಿ ಸೇನೆ ಮಂಗಳವಾರ ಹೇಳಿದೆ.
ತಯಾಸಿರ್ನಲ್ಲಿ ಮಿಲಿಟರಿ ಚೆಕ್ಪೋಸ್ಟ್ ಮೇಲೆ ಓರ್ವ ಉಗ್ರ ಗುಂಡಿನ ದಾಳಿ ನಡೆಸಿದ್ದು ಗಾಯಗೊಂಡಿರುವ ಇಬ್ಬರು ಯೋಧರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆಕ್ಪೋಸ್ಟ್ನಲ್ಲಿದ್ದ ಇತರ 6 ಮಂದಿಯೂ ಗಾಯಗೊಂಡಿದ್ದು ಪ್ರಾಥಮಿಕ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ಇಸ್ರೇಲಿ ಸೇನೆಯ ರೇಡಿಯೊ ವರದಿ ಮಾಡಿದೆ. ಪಶ್ಚಿಮದಂಡೆಯ ಉತ್ತರ ಪ್ರದೇಶದಲ್ಲಿ ಮುಖ್ಯವಾಗಿ ಜೆನಿನ್ ನಗರದಲ್ಲಿ `ಭಯೋತ್ಪಾದನೆ ನಿಗ್ರಹ' ಕಾರ್ಯಾಚರಣೆ ನಡೆಸುತ್ತಿದ್ದು ಕಾರ್ಯಾಚರಣೆ ಆರಂಭಿಸಿದ ಜನವರಿ 21ರಿಂದ ಕನಿಷ್ಠ 50 ಸಶಸ್ತ್ರ ಹೋರಾಟಗಾರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲಿ ಸೇನೆ ಹೇಳಿದೆ. ಈ ಕಾರ್ಯಾಚರಣೆಯಲ್ಲಿ ಜೆನಿನ್ ಪಕ್ಕದ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಸೈನಿಕರು ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ. ಇಸ್ರೇಲ್ನ ಕಾರ್ಯಾಚರಣೆ `ಜನಾಂಗೀಯ ಶುದ್ಧೀಕರಣ' ಎಂದು ಫೆಲೆಸ್ತೀನ್ ಪ್ರಾಧಿಕಾರ ಖಂಡಿಸಿದೆ.