West Bengal | ಭವಾನಿಪುರದಲ್ಲಿ ನಾಮಪತ್ರ ರದ್ದತಿಗೆ ಪಿತೂರಿ: ಮಮತಾ ಬ್ಯಾನರ್ಜಿ ಆರೋಪ

ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತ್ತಾ,ಎ.12: ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ನಾಮಪತ್ರವನ್ನು ರದ್ದುಗೊಳಿಸಲು ಉದ್ದೇಶಪೂರ್ವಕ ಪಿತೂರಿ ನಡೆದಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ; ವ್ಯವಸ್ಥೆಯಲ್ಲಿರುವ ದೋಷಗಳ ವಿರುದ್ಧ. ನನ್ನ ಸ್ವಂತ ಕ್ಷೇತ್ರದಲ್ಲೇ ನನ್ನ ವಿರುದ್ಧ ಎರಡು ಸುಳ್ಳು ಅಫಿಡವಿಟ್ ಗಳನ್ನು ಸಲ್ಲಿಸಿ ನಾಮಪತ್ರವನ್ನು ರದ್ದುಗೊಳಿಸಲು ಯತ್ನಿಸಿದರು. ಅವರು ಯಶಸ್ವಿಯಾಗಲಿಲ್ಲ, ಆದರೆ ಹಲವು ಬಾರಿ ಪ್ರಯತ್ನಿಸಿದರು,” ಎಂದು ಅವರು ಹೇಳಿದ್ದಾರೆ.
“ನನ್ನನ್ನು ಸ್ಪರ್ಧಿಸದಂತೆ ತಡೆಯಲು ಪ್ರಯತ್ನಿಸಿದ್ದರೆ, ಸಾಮಾನ್ಯ ಜನರ ಮೇಲೂ ಏನು ಮಾಡಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು,” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಪರಿಶೀಲನೆ ವೇಳೆ ಕೆಲವು ಆಕ್ಷೇಪಣೆಗಳು ಎದುರಾಯಿತು. ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರ ಪತ್ನಿ ಹಾಗೂ ಸೂಚಕರಾದ ಇಸ್ಮತ್ ಹಕೀಮ್ ಅವರ ಹೆಸರಿನ ವ್ಯತ್ಯಾಸದ ಬಗ್ಗೆ ಪ್ರಶ್ನೆ ಎತ್ತಲಾಗಿತ್ತು. ಅವರು ವಿವಾಹಕ್ಕೂ ಮೊದಲು ‘ಇಸ್ಮತ್ ಅರಾ’ ಎಂಬ ಹೆಸರನ್ನು ಬಳಸುತ್ತಿದ್ದರು. ನಂತರ ದಾಖಲೆಗಳಲ್ಲಿ ‘ಇಸ್ಮತ್ ಹಕೀಮ್’ ಎಂದು ಬದಲಾಯಿಸಲಾಗಿತ್ತು. ಪರಿಶೀಲನೆ ವೇಳೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಈ ಗೊಂದಲ ನಿವಾರಣೆಯಾಯಿತು.
“ಇಂತಹ ವಿಷಯಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತವೆ. ಆದರೆ ಇಲ್ಲಿ ಸೂಚಕರನ್ನು ಸುಮಾರು ಎರಡು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು. ಇದರಿಂದ ಅನುಮಾನ ಉಂಟಾಯಿತು,” ಎಂದು ಟಿಎಂಸಿ ಸದಸ್ಯರೊಬ್ಬರು ಹೇಳಿದರು.
ಇನ್ನೊಂದು ಆಕ್ಷೇಪಣೆ, ಸುಮಾರು ಎರಡು ದಶಕಗಳ ಹಿಂದೆ ಬಹಿರಂಗಪಡಿಸದ ಕ್ರಿಮಿನಲ್ ಪ್ರಕರಣಗಳ ಕುರಿತು ಮಾಡಲಾಗಿತ್ತು. ಆದರೆ ಇದಕ್ಕೆ ಯಾವುದೇ ಪುರಾವೆಗಳು ಇರಲಿಲ್ಲ ಎಂದು ಪಕ್ಷದ ಕಾರ್ಯಕಾರಿಣಿ ಸ್ಪಷ್ಟಪಡಿಸಿದರು. ಆ ವಿಭಾಗವನ್ನು ‘ಅನ್ವಯಿಸುವುದಿಲ್ಲ’ ಎಂದು ಗುರುತಿಸಲಾಗಿತ್ತು ಎಂದರು.
ಇದೇ ವೇಳೆ, ಅಭ್ಯರ್ಥಿಗಳ ಸಂಖ್ಯೆ 17ಕ್ಕೆ ಏರಿದ ಹಿನ್ನೆಲೆಯಲ್ಲಿ ಇವಿಎಂ ವ್ಯವಸ್ಥೆಯ ಸಮಸ್ಯೆಯೂ ಎದುರಾಯಿತು. ಒಂದು ಇವಿಎಂನಲ್ಲಿ 16 ಹೆಸರುಗಳನ್ನು ಮಾತ್ರ ತೋರಿಸಲು ಸಾಧ್ಯವಾಗುವುದರಿಂದ, ಮಮತಾ ಬ್ಯಾನರ್ಜಿ ಅವರ ಹೆಸರು ಎರಡನೇ ಯಂತ್ರಕ್ಕೆ ಹೋಗುವ ಸಾಧ್ಯತೆ ಇತ್ತು. ಇದಕ್ಕೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿತು.
“ಮುಖ್ಯಮಂತ್ರಿಯವರ ಹೆಸರನ್ನು ಎರಡನೇ ಇವಿಎಂಗೆ ಹಾಕುವುದು ಗೊಂದಲಕ್ಕೆ ಕಾರಣವಾಗುತ್ತಿತ್ತು,” ಎಂದು ಪಕ್ಷದ ಕಾರ್ಯಕಾರಿಣಿ ಹೇಳಿದರು. ನಂತರ ನಾಲ್ಕು ನಾಮಪತ್ರಗಳನ್ನು ರದ್ದುಗೊಳಿಸಲಾಗಿದ್ದು, ಒಂದೇ ಇವಿಎಂ ಸಾಕಾವ ಪರಿಸ್ಥಿತಿ ನಿರ್ಮಾಣವಾಯಿತು.







