"ನಾನಿಲ್ಲದಿದ್ದರೆ ಪತಿಯ ಗತಿ ಏನಾಗಬಹುದು" | ಪ್ರವಾಹ ಎಚ್ಚರಿಕೆ ನೀಡಿದ್ದರೂ ಹಾಸಿಗೆ ಹಿಡಿದಿರುವ ಪತಿಯೊಂದಿಗೆ ಮನೆಯಲ್ಲೇ ಉಳಿದ ನೇಪಾಳಿ ಮಹಿಳೆ!

Photo Credit: X/@NDTVWorld
ಕಠ್ಮಂಡು: ಆಗಸ್ಟ್ 26 ರಂದು ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತವು ರಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಅಪಾರ ಹಾನಿಯನ್ನುಂಟುಮಾಡಿದೆ. ಈಗ ಮತ್ತೆ ಹೊಸ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದರೂ, ತ್ರಿಶೂಲಿ ಬಜಾರ್ ನಿವಾಸಿ ತಮಾಂಗ್ ಎಂಬ ಮಹಿಳೆ ತನ್ನ ಹಾಸಿಗೆ ಹಿಡಿದ ಪತಿಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಲು ನಿರಾಕರಿಸಿದ್ದಾರೆ. ತನ್ನ ಪತಿಗೆ ನಡೆಯಲು ಅಸಾಧ್ಯವಾಗಿರುವುದರಿಂದ ತಾನು ಮನೆಯಲ್ಲೇ ಉಳಿಯುವುದಾಗಿ ಅವರು ತಿಳಿಸಿದ್ದಾರೆ. ತಾನಿಲ್ಲದಿದ್ದರೆ ತನ್ನ ಪತಿಯ ಗತಿ ಏನಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
ಒಮ್ಮೆ ಚಟುವಟಿಕೆಗಳಿಂದ ತುಂಬಿದ್ದ ತ್ರಿಶೂಲಿ ಬಜಾರ್ ಪ್ರದೇಶವು ಈಗ ಸಂಪೂರ್ಣವಾಗಿ ಕೆಸರು, ಶಿಥಿಲಗೊಂಡ ಅವಶೇಷಗಳು ಮತ್ತು ನಾಶವಾದ ಮನೆಗಳಿಗೆ ಸಾಕ್ಷಿಯಾಗಿದೆ.
ನೇಪಾಳದ ಕೆಲವು ಭಾಗಗಳಲ್ಲಿ ಪುನಃ ಸಂಭಾವ್ಯ ಪ್ರವಾಹದ ಎಚ್ಚರಿಕೆ ಹೊರಡಿಸಲಾದ ಬಳಿಕ ತ್ರಿಶೂಲಿ ಬಝಾರ್ ಪ್ರದೇಶಕ್ಕೆ ಭೇಟಿ ನೀಡಿದ್ದ NDTVಯ ಪತ್ರಕರ್ತೆ ಸಿಕ್ತಾ ದೇವ್ ಅವರ ‘ಎಚ್ಚರಿಕೆ ನೀಡಿದ್ದರೂ ನೀವೇಕೆ ಇಲ್ಲಿಂದ ತೆರಳಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ತಮಾಂಗ್, ‘ನನ್ನ ಪತಿಗೆ ವಯಸ್ಸಾಗಿದೆ ಮತ್ತು ಅವರಿಗೆ ನಡೆಯಲು ಆಗುವುದಿಲ್ಲ. ಹಾಗಾಗಿ ನಾನು ಅವರನ್ನು ಬಿಟ್ಟು ಹೋಗಲಾರೆ, ಏನೇ ಆದರೂ ನಾನು ಇಲ್ಲಿಯೇ ಇರುತ್ತೇನೆ’ ಎಂದು ಕಣ್ಣೀರಿಟ್ಟಿದ್ದಾರೆ.
ಈ ದಂಪತಿ ಈಗಾಗಲೇ ಹಿಂದಿನ ವಿನಾಶಕಾರಿ ಪ್ರವಾಹದಿಂದ ಪಾರಾಗಿದ್ದರೂ, ಈಗ ಮತ್ತೊಮ್ಮೆ ಅದೇ ಅಪಾಯವನ್ನು ಎದುರಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸ್ಥಳಾಂತರಗೊಳ್ಳಲು ಸಾಧ್ಯವಾಗದ ವೃದ್ಧರು ಮತ್ತು ಹಾಸಿಗೆ ಹಿಡಿದ ರೋಗಿಗಳಂತಹ ದುರ್ಬಲ ವರ್ಗದ ಜನರು ಎದುರಿಸುತ್ತಿರುವ ತೀವ್ರ ಸಂಕಷ್ಟಗಳನ್ನು ಈ ಘಟನೆಯು ಎತ್ತಿ ತೋರಿಸಿದೆ.
ಅಂತಹ ವೃದ್ಧ ಮತ್ತು ಅಶಕ್ತ ವ್ಯಕ್ತಿಗಳನ್ನು ಪ್ರವಾಹಕ್ಕೂ ಮುನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತುರ್ತು ವ್ಯವಸ್ಥೆಗಳನ್ನು ಮಾಡಬೇಕು ಎಂದು ಪತ್ರಕರ್ತೆ ದೇವ್ ಒತ್ತಾಯಿಸಿದ್ದಾರೆ. ಭವಿಷ್ಯದ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ತಮಾಂಗ್ ಅವರಂತಹ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕೃಪೆ: NDTV






