ಕಾರು ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದ ಬೆನ್ನಲ್ಲೇ ವೈಟ್ ಹೌಸ್ ಗೆ ನಿರ್ಬಂಧ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿದ್ದಾಗಲೇ ನಡೆದ ಘಟನೆ

Photo Credit: Screengrab/X
ವಾಶಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ನಿವಾಸ ವೈಟ್ ಹೌಸ್ ನ ಮುಂಭಾಗದಲ್ಲೇ ಕಾರೊಂದು ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ. ವಾಷಿಂಗ್ಟನ್ ಡಿಸಿಯ ಲಾಫಯೆಟ್ ಸ್ಕ್ವೇರ್ ನಲ್ಲಿ ನಡೆದ ಈ ಘಟನೆಯಿಂದ ಎಚ್ಚೆತ್ತ ಭದ್ರತಾ ಪಡೆಗಳು ವೈಟ್ ಹೌಸ್ ಗೆ ತಾತ್ಕಾಲಿಕ ನಿರ್ಬಂಧ ಜಾರಿಗೊಳಿಸಿದ್ದಾರೆ ಎಂದು India Today ವರದಿ ಮಾಡಿದೆ.
ಘಟನೆ ನಡೆದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಅಧ್ಯಕ್ಷರ ಭದ್ರತೆಯ ಹೊಣೆ ಹೊತ್ತಿರುವ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಹಾಗೂ ನ್ಯಾಷನಲ್ ಗಾರ್ಡ್ ಸಿಬ್ಬಂದಿಯೊಂದಿಗೆ ಸಂಘರ್ಷಕ್ಕಿಳಿದ ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋ ದೃಶ್ಯಾವಳಿಗಳ ಪ್ರಕಾರ, ಸೆಡಾನ್ ಕಾರೊಂದು ಲಾಫಯೆಟ್ ಸ್ಕ್ವೇರ್ ನ ಉತ್ತರ ಭಾಗದಲ್ಲಿರುವ ಪಾದಚಾರಿ ಮಾರ್ಗದತ್ತ ನುಗ್ಗಿ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಬಳಿಕ ಕಾರಿನಿಂದ ಹೊಗೆ ಹೊರಬರುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.
ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಭದ್ರತಾ ಸಿಬ್ಬಂದಿ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ವೈಟ್ ಹೌಸ್ ನಲ್ಲಿದ್ದ ಪತ್ರಕರ್ತರಿಗೆ ಒಳಾಂಗಣಕ್ಕೆ ತೆರಳಿ ಅಲ್ಲಿಯೇ ಇರುವಂತೆ ಸೀಕ್ರೆಟ್ ಸರ್ವಿಸ್ ಸೂಚನೆ ನೀಡಿತು ಎಂದು ತಿಳಿದು ಬಂದಿದೆ.
ಭದ್ರತಾ ಸಿಬ್ಬಂದಿಯೊಂದಿಗೆ ಸಂಘರ್ಷಕ್ಕಿಳಿದ ಬಳಿಕ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಆತನ ಗುರುತು, ಅಪಘಾತಕ್ಕೆ ಕಾರಣ ಹಾಗೂ ಘಟನೆಯ ಹಿಂದಿನ ಉದ್ದೇಶದ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.






