ಭಾರತದ ಕೆಮ್ಮಿನ ಔಷಧಿ ಪರೀಕ್ಷೆಯಲ್ಲಿ ನ್ಯೂನತೆಯಿದೆ: ವಿಶ್ವ ಆರೋಗ್ಯ ಸಂಸ್ಥೆ

Photo Credit : NDTV
ಹೊಸದಿಲ್ಲಿ/ಚೆನ್ನೈ: ವಿಷಕಾರಿ ಪದಾರ್ಥ ಹೊಂದಿದ್ದ ಕೆಮ್ಮು ಔಷಧಿ ಸೇವಿಸಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಕ್ಕಳು ಮೃತಪಟ್ಟ ಬೆನ್ನಿಗೇ, ಮತ್ತೆರಡು ಬ್ರ್ಯಾಂಡಿನ ಕೆಮ್ಮು ಸಿರಪ್ ಗಳ ಸೇವನೆಯನ್ನು ತಪ್ಪಿಸಿ ಎಂದು ಭಾರತೀಯ ಪ್ರಾಧಿಕಾರಗಳು ಸಾರ್ವಜನಿಕರಿಗೆ ಸಲಹೆ ನೀಡಿವೆ. ಇದರ ಬೆನ್ನಿಗೇ, ಸ್ಥಳೀಯವಾಗಿ ಮಾರಾಟವಾಗುವ ಸಿರಪ್ ಔಷಧಗಳ ಪರೀಕ್ಷೆಯಲ್ಲಿ ಭಾರತವು ಶಾಸನಾತ್ಮಕ ನ್ಯೂನತೆ ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಅನುಮತಿ ನೀಡಲಾಗಿರುವ ಪ್ರಮಾಣಕ್ಕಿಂತ ಸುಮಾರು 500 ಪಟ್ಟು ಅಧಿಕವಾಗಿದ್ದ ಡೈಎಥಿಲೀನ್ ಗ್ಲೈಕಾಲ್ ಅನ್ನು ಹೊಂದಿದ್ದ ಕೆಮ್ಮು ಔಷಧಿಯನ್ನು ಸೇವಿಸಿ ಕಳೆದ ಕೆಲವು ತಿಂಗಳಿಂದ ಭಾರತದಲ್ಲಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಾವುಗಳು ಕೋಲ್ಡ್ರಿಫ್ ಔಷಧಿ ಸೇವನೆಯಿಂದ ಸಂಭವಿಸಿದ್ದು, ಅಕ್ಟೋಬರ್ 2ರಂದು ನಿಷೇಧಿಸಲಾಗಿರುವ ಈ ಔಷಧದಲ್ಲಿ ಡೈಎಥಿಲೀನ್ ಗ್ಲೈಕಾಲ್ ರಾಸಾಯನಿಕವಿದ್ದದ್ದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ಇದೀಗ, ರೆಸ್ಪಿಫ್ರೆಶ್ ಹಾಗೂ ರೀಲೈಫ್ ಸಿರಪ್ ಗಳಲ್ಲೂ ಡೈಎಥಿಲೀನ್ ಗ್ಲೈಕಾಲ್ ರಾಸಾಯನಿಕವಿರುವುದು ಪತ್ತೆಯಾಗಿದೆ ಎಂದು ಬುಧವಾರ ಗುಜರಾತ್ ಹಾಗೂ ಮತ್ತಿತರ ರಾಜ್ಯಗಳು ಬಿಡುಗಡೆ ಮಾಡಿರುವ ಸಾರ್ವಜನಿಕ ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
“ಈ ವಿಷಕಾರಿ ರಾಸಾಯನಿಕವು ಮೂತ್ರಪಿಂಡ ವೈಫಲ್ಯ, ನರಸಂಬಂಧಿ ಸಮಸ್ಯೆಗಳು ಹಾಗೂ ಸಾವಿನಂತಹ ಗಂಭೀರ ಅಪಾಯಕಾರಿ ಸ್ಥಿತಿಗಳಿಗೆ ಕಾರಣವಾಗಬಹುದು. ವಿಶೇಷವಾಗಿ, ಮಕ್ಕಳಲ್ಲಿ” ಎಂದೂ ಈ ಎಚ್ಚರಿಕೆಯಲ್ಲಿ ಹೇಳಲಾಗಿದೆ.
ಮೂರು ಕಲುಷಿತ ಸಿರಪ್ ಗಳನ್ನು ಪತ್ತೆ ಹಚ್ಚಲಾಗಿದ್ದು, ಈ ಯಾವನ್ನೂ ರಫ್ತು ಮಾಡಲಾಗಿಲ್ಲ ಎಂಬ ದೃಢೀಕರಣವನ್ನು ಬುಧವಾರ ಭಾರತದಿಂದ ಸ್ವೀಕರಿಸಲಾಗಿದೆ ಎಂದು Reuters ಸುದ್ದಿ ಸಂಸ್ಥೆಗೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಆದರೆ, ಈ ಔಷಧಿಗಳನ್ನು ಅನಧಿಕೃತವಾಗಿ ರಫ್ತು ಮಾಡಿರಬಹುದಾದ ಸಾಧ್ಯತೆ ಇದ್ದು, ಮಾಲಿನ್ಯದ ಮೂಲ ಇನ್ನೂ ಪತ್ತೆಯಾಗಿಲ್ಲ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
“ಈ ಬೆಳವಣಿಗೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸುತ್ತದೆ ಹಾಗೂ ಭಾರತದಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಮಾಡಲಾಗುವ ಔಷಧಗಳಲ್ಲಿನ ಡೈಎಥಿಲೀನ್ ಗ್ಲೈಕಾಲ್/ಎಥಿಲೀನ್ ಪರೀಕ್ಷೆಯಲ್ಲಿ ನ್ಯೂನತೆಯಿದೆ ಎಂದು ಒತ್ತಿ ಹೇಳುತ್ತದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.







