ತೀವ್ರಗತಿಯಲ್ಲಿ ಹರಡುತ್ತಿರುವ ಎಬೋಲಾ ರೋಗ: ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

Image Credit: X/@WHO
ಜಿನೆವಾ, ಮೇ 17: ಕಾಂಗೋ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ 80ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಮಾರಣಾಂತಿಕ ಎಬೋಲಾ ಸಾಂಕ್ರಾಮಿಕ ರೋಗವನ್ನು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವಸಂಸ್ಥೆ ಘೋಷಿಸಿದ್ದು ಸಾಂಕ್ರಾಮಿಕ ರೋಗ ತೀವ್ರ ಗತಿಯಲ್ಲಿ ಉಲ್ಬಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಈ ಸಾಂಕ್ರಾಮಿಕವು ಜಾಗತಿಕ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಅರ್ಹತೆಯನ್ನು ಪಡೆದಿದ್ದು ಇದು ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳ ಅಡಿಯಲ್ಲಿ ಎರಡನೆಯ ಗರಿಷ್ಠ ಎಚ್ಚರಿಕೆಯ ಮಟ್ಟವಾಗಿದೆ. ಆದರೆ ಸಾಂಕ್ರಾಮಿಕ ತುರ್ತುಪರಿಸ್ಥಿತಿ ಘೋಷಿಸುವ ಅಗತ್ಯ ಈಗ ಕಂಡುಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸೋಂಕುಗಳ ನಿಜವಾದ ಸಂಖ್ಯೆ ಮತ್ತು ಭೌಗೋಳಿಕ ಹರಡುವಿಕೆಯು ಪ್ರಸ್ತುತ ಪತ್ತೆಹಚ್ಚಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಿರಬಹುದು. ಎರಡು ದೇಶಗಳಲ್ಲಿ ಹೆಚ್ಚುತ್ತಿರುವ ಶಂಕಿತ ಪ್ರಕರಣಗಳು, ದೃಢಪಡಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು, ಪಾಸಿಟಿವ್ ದರ ಅಧಿಕವಾಗಿರುವುದು ಸೋಂಕು ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಅಪಾಯವನ್ನು ಸೂಚಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ವೈರಸ್ ಈಗಾಗಲೇ ಗಡಿಗಳನ್ನು ದಾಟಿದ್ದು ಬುಂಡಿಬುಗ್ಯೋ ವೈರಸ್ನಿಂದ ಬಳಲುತ್ತಿದ್ದ ಕಾಂಗೋ ಪ್ರಜೆಯೊಬ್ಬ ನೆರೆಯ ಉಗಾಂಡಾದಲ್ಲಿ ಮೃತಪಟ್ಟಿದ್ದಾನೆ.
ಆಫ್ರಿಕಾದ `ರೋಗನಿಯಂತ್ರಣ ಮತ್ತು ತಡೆ ಕೇಂದ್ರಗಳ' ಪ್ರಕಾರ ಶನಿವಾರ(ಮೇ 16)ದವರೆಗೆ ಭೀಕರ ಸಾಂಕ್ರಾಮಿಕ ರೋಗದಿಂದ 88 ಮಂದಿ ಮೃತಪಟ್ಟಿದ್ದು 336 ಶಂಕಿತ ಸೋಂಕು ಪ್ರಕರಣ ದಾಖಲಾಗಿದೆ. ಬುಂಡಿಬುಗ್ಯೋ ಎಂದು ಹೆಸರಿಸಲಾದ ಪ್ರಬೇಧದ ವೈರಸ್ ಸೋಂಕು ಉಲ್ಬಣಿಸಿದ್ದು ಪ್ರಸ್ತುತ ಇದಕ್ಕೆ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಈ ಪ್ರಬೇಧದ ಸಾಂಕ್ರಾಮಿಕವು ಹೆಚ್ಚು ಮಾರಣಾಂತಿಕ ಪ್ರಮಾಣವನ್ನು ಹೊಂದಿದ್ದು ಮರಣ ಪ್ರಮಾಣ ಶೇಕಡಾ 50ನ್ನು ತಲುಪಬಹುದು ಎಂದು ಕಾಂಗೋ ಪ್ರಜಾತಾಂತ್ರಿಕ ಗಣರಾಜ್ಯದ ಆರೋಗ್ಯ ಸಚಿವ ಸಾಮ್ಯುವೆಲ್-ರೋಜರ್ ಕಾಂಬಾ ಹೇಳಿದ್ದಾರೆ.






