ಡೆಮಾಕ್ರಟಿಕ್ ನಾಯಕ ಶುಮರ್ ಗೆ ಸವಾಲೆಸೆದ ಪಾಕಿಸ್ತಾನ ಮೂಲದ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಯಾರು?
ಟ್ರಂಪ್ ವಿರೋಧಿ, ಗಾಝಾ ಪರ ಧ್ವನಿಯಾಗಿದ್ದ ಕ್ರಿಸ್

ಕ್ರಿಸ್ ವ್ಯಾನ್ ಹೊಲೆನ್ (Photo: Reuters)
ವಾಷಿಂಗ್ಟನ್: ಅಮೆರಿಕದ ಡೆಮಾಕ್ರಟಿಕ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದೆ. ಪಕ್ಷದ ಹಿರಿಯ ನಾಯಕ ಚಕ್ ಶುಮರ್ ಅವರ ಸ್ಥಾನಕ್ಕೆ ಮೇರಿಲ್ಯಾಂಡ್ ನ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಪಕ್ಷದೊಳಗೆ ಹೊಸ ರಾಜಕೀಯ ಪೈಪೋಟಿಗೆ ನಾಂದಿ ಹಾಡಿದ್ದಾರೆ.
ಟ್ರಂಪ್ ಆಡಳಿತದ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿರುವ ಮತ್ತು ಗಾಝಾದಲ್ಲಿ ಫೆಲೆಸ್ತೀನಿಯನ್ನರ ಪರವಾಗಿ ಧ್ವನಿ ಎತ್ತುತ್ತಿರುವ ವ್ಯಾನ್ ಹೊಲೆನ್, ಇದೀಗ ಪಕ್ಷದ ನಾಯಕತ್ವದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದಾರೆ.
ಅಮೆರಿಕದ ಮಧ್ಯಾವಧಿ ಚುನಾವಣೆಯಲ್ಲಿ ಡೆಮಾಕ್ರಟ್ ಗಳು ಉತ್ತಮ ಸಾಧನೆ ಮಾಡಿದ ಕೆಲವೇ ದಿನಗಳಲ್ಲಿ ಗುರುವಾರ ಅವರು ಈ ಘೋಷಣೆ ಮಾಡಿದ್ದಾರೆ. ಸೆನೆಟ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕತ್ವಕ್ಕಾಗಿ ನಡೆಯಲಿರುವ ಈ ಪೈಪೋಟಿ ಶುಮರ್ ಮತ್ತು ವ್ಯಾನ್ ಹೊಲೆನ್ ನಡುವಿನ ನೇರ ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದೆ.
1959ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಕ್ರಿಸ್ ವ್ಯಾನ್ ಹೊಲೆನ್ ಅವರ ಹಿನ್ನೆಲೆಯೇ ವಿಶಿಷ್ಟ. ಅವರ ತಂದೆ ಅಮೆರಿಕದ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದರು. ಬಳಿಕ ಪೂರ್ವ ಮತ್ತು ದಕ್ಷಿಣ ಏಷ್ಯಾ ವ್ಯವಹಾರಗಳ ಅಮೆರಿಕದ ಉಪ ಸಹಾಯಕ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರ ತಾಯಿ ಅಮೆರಿಕದ ಗುಪ್ತಚರ ಸಂಸ್ಥೆ CIA ಮತ್ತು ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಿದ್ದರು.
ರಾಜತಾಂತ್ರಿಕ ಕುಟುಂಬದಲ್ಲಿ ಬೆಳೆದ ವ್ಯಾನ್ ಹೊಲೆನ್ ಅವರ ರಾಜಕೀಯ ಚಿಂತನೆಗಳ ಮೇಲೂ ಈ ಹಿನ್ನೆಲೆ ಪ್ರಭಾವ ಬೀರಿದೆ. ಯುದ್ಧ, ವಿದೇಶಾಂಗ ನೀತಿ, ಮಾನವೀಯ ನೆರವು ಮತ್ತು ಮಾನವ ಹಕ್ಕುಗಳ ವಿಚಾರಗಳಲ್ಲಿ ಅವರಿಗಿರುವ ಆಸಕ್ತಿಗೆ ಇದು ಒಂದು ಕಾರಣವಾಗಿದೆ.
1982ರಲ್ಲಿ ಸ್ವಾರ್ತ್ಮೋರ್ ಕಾಲೇಜಿನಿಂದ ತತ್ವಶಾಸ್ತ್ರದಲ್ಲಿ ಪದವಿ ಪಡೆದ ಅವರು, ಬಳಿಕ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು.
1985ರಿಂದ 1987ರವರೆಗೆ ಮೇರಿಲ್ಯಾಂಡ್ ನ ರಿಪಬ್ಲಿಕನ್ ಸೆನೆಟರ್ ಚಾರ್ಲ್ಸ್ ಮಥಿಯಾಸ್ ಅವರ ಶಾಸಕಾಂಗ ಸಹಾಯಕರಾಗಿ ಕೆಲಸ ಮಾಡಿದರು. ರಕ್ಷಣಾ ಮತ್ತು ವಿದೇಶಾಂಗ ನೀತಿಯ ವಿಷಯಗಳನ್ನು ನಿರ್ವಹಿಸಿದರು. ಮೇರಿಲ್ಯಾಂಡ್ ಗವರ್ನರ್ ವಿಲಿಯಂ ಡೊನಾಲ್ಡ್ ಸ್ಕೇಫರ್ ಅವರ ಸಿಬ್ಬಂದಿಯಲ್ಲಿಯೂ ಸೇವೆ ಸಲ್ಲಿಸಿದರು. 1990ರಲ್ಲಿ ಮೇರಿಲ್ಯಾಂಡ್ ಬಾರ್ ಗೆ ಸೇರ್ಪಡೆಯಾಗಿ ಅರೆಂಟ್ ಫಾಕ್ಸ್ ಕಾನೂನು ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದರು.
1991ರಲ್ಲಿ ಮೇರಿಲ್ಯಾಂಡ್ ಜನರಲ್ ಅಸೆಂಬ್ಲಿಗೆ ಆಯ್ಕೆಯಾಗುವ ಮೂಲಕ ಚುನಾವಣಾ ರಾಜಕೀಯ ಪ್ರವೇಶಿಸಿದ ವ್ಯಾನ್ ಹೊಲೆನ್, 2003ರವರೆಗೆ ಅಲ್ಲಿ ಸೇವೆ ಸಲ್ಲಿಸಿದರು. ನಾಲ್ಕು ವರ್ಷ ಹೌಸ್ ಆಫ್ ಡೆಲಿಗೇಟ್ಸ್ ಸದಸ್ಯರಾಗಿದ್ದ ಅವರು, ಎಂಟು ವರ್ಷ ರಾಜ್ಯ ಸೆನೆಟರ್ ಆಗಿದ್ದರು.
ಈ ಅವಧಿಯಲ್ಲಿ ಶಾಲೆಗಳಿಗೆ ಅನುದಾನ, ಆರೋಗ್ಯ ವಿಮೆ ಸುಧಾರಣೆ ಮತ್ತು ಬಂದೂಕು ಸುರಕ್ಷತೆಯ ವಿಚಾರಗಳಲ್ಲಿ ಕೆಲಸ ಮಾಡಿದರು. ಚೆಸಾಪೀಕ್ ಕೊಲ್ಲಿಯಲ್ಲಿ ತೈಲ ಕೊರೆಯುವ ಚಟುವಟಿಕೆಗಳನ್ನು ವಿರೋಧಿಸಿದ್ದರು.
2002ರಲ್ಲಿ ಮೇರಿಲ್ಯಾಂಡ್ ನ 8ನೇ ಕಾಂಗ್ರೆಸ್ ಕ್ಷೇತ್ರದಿಂದ ಅಮೆರಿಕದ ಪ್ರತಿನಿಧಿ ಸಭೆಗೆ ಸ್ಪರ್ಧಿಸಿ ರಿಪಬ್ಲಿಕನ್ ಪಕ್ಷದ ಹಾಲಿ ಸದಸ್ಯೆ ಕೋನಿ ಮೊರೆಲ್ಲಾ ಅವರನ್ನು ಸೋಲಿಸಿದರು. ವ್ಯಾನ್ ಹೊಲೆನ್ ಶೇ. 51.7ರಷ್ಟು ಮತಗಳನ್ನು ಪಡೆದರೆ, ಮೊರೆಲ್ಲಾ ಶೇ. 48.2ರಷ್ಟು ಮತ ಗಳಿಸಿದ್ದರು.
2003ರಿಂದ 2017ರವರೆಗೆ 14 ವರ್ಷಗಳ ಕಾಲ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸದಸ್ಯರಾಗಿದ್ದರು. 2010ರಲ್ಲಿ ಹೌಸ್ ಬಜೆಟ್ ಸಮಿತಿಯ ಪ್ರಮುಖ ಡೆಮಾಕ್ರಟಿಕ್ ಸದಸ್ಯರಾಗಿ ಆಯ್ಕೆಯಾದರು. ಶಿಕ್ಷಣ ಕ್ಷೇತ್ರದಲ್ಲಿನ ಕೆಲಸವನ್ನು ಗುರುತಿಸಿ 2003ರಲ್ಲಿ ಕಮಿಟಿ ಫಾರ್ ಎಜುಕೇಶನ್ ಫಂಡಿಂಗ್ ಸಂಸ್ಥೆ ಅವರನ್ನು 'ವರ್ಷದ ಅತ್ಯುತ್ತಮ ಹೊಸ ಸದಸ್ಯ' ಎಂದು ಗೌರವಿಸಿತ್ತು.
2016ರಲ್ಲಿ ಮೇರಿಲ್ಯಾಂಡ್ ಸೆನೆಟರ್ ಬಾರ್ಬರಾ ಮಿಕುಲ್ಸ್ಕಿ ನಿವೃತ್ತರಾದಾಗ ಅವರ ಸ್ಥಾನಕ್ಕೆ ವ್ಯಾನ್ ಹೊಲೆನ್ ಸ್ಪರ್ಧಿಸಿದರು. ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯೆ ಡೊನ್ನಾ ಎಡ್ವರ್ಡ್ಸ್ ಅವರನ್ನು ಸೋಲಿಸಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 60ರಷ್ಟು ಮತಗಳನ್ನು ಪಡೆದು ಗೆದ್ದರು. ಎದುರಾಳಿ ಶೇ. 36ರಷ್ಟು ಮತ ಗಳಿಸಿದ್ದರು.
2017ರ ಜನವರಿ 3ರಂದು ಸೆನೆಟರ್ ಆಗಿ ಅಧಿಕಾರ ವಹಿಸಿಕೊಂಡ ಅವರು, 2017ರಿಂದ 2019ರವರೆಗೆ ಡೆಮಾಕ್ರಟಿಕ್ ಸೆನೆಟೋರಿಯಲ್ ಕ್ಯಾಂಪೇನ್ ಕಮಿಟಿಯ ಅಧ್ಯಕ್ಷರಾಗಿದ್ದರು. ದೇಶಾದ್ಯಂತ ಡೆಮಾಕ್ರಟಿಕ್ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಪ್ರಚಾರಕ್ಕೆ ನೆರವಾಗುವುದು ಈ ಸಮಿತಿಯ ಜವಾಬ್ದಾರಿಯಾಗಿತ್ತು.
2025ರಲ್ಲಿ ಬೆನ್ ಕಾರ್ಡಿನ್ ನಿವೃತ್ತರಾದ ಬಳಿಕ ಮೇರಿಲ್ಯಾಂಡ್ ನ ಹಿರಿಯ ಸೆನೆಟರ್ ಆಗಿರುವ ವ್ಯಾನ್ ಹೊಲೆನ್, ಪ್ರತಿನಿಧಿ ಸ್ಟೆನಿ ಹೋಯರ್ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ 2027ರಲ್ಲಿ ರಾಜ್ಯದ ಕಾಂಗ್ರೆಸ್ ನಿಯೋಗದ ಮುಖ್ಯಸ್ಥರಾಗುವ ನಿರೀಕ್ಷೆಯಿದೆ. ಹಣಕಾಸು ಹಂಚಿಕೆ ಸಮಿತಿ ಸೇರಿದಂತೆ ಹಲವು ಸಮಿತಿಗಳಲ್ಲಿಯೂ ಅವರು ಸದಸ್ಯರಾಗಿದ್ದಾರೆ. 1987ರಲ್ಲಿ ಕ್ಯಾಥರೀನ್ ವಿಲ್ಕೆನ್ಸ್ ಅವರನ್ನು ವಿವಾಹವಾಗಿರುವ ಅವರಿಗೆ ಮೂವರು ಮಕ್ಕಳಿದ್ದಾರೆ.
ಟ್ರಂಪ್ ವಿರುದ್ಧದ ನಿಲುವಿನಿಂದ ಹೆಚ್ಚಿದ ಪ್ರಭಾವ
ಯುದ್ಧ ವಿರೋಧಿ ನಿಲುವು ಮತ್ತು ಪ್ರಗತಿಪರ ರಾಜಕೀಯ ಆಶಯಗಳಿಗೆ ಹೆಸರಾದ ವ್ಯಾನ್ ಹೊಲೆನ್, ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ.
2025ರ ಎಪ್ರಿಲ್ ನಲ್ಲಿ ಎಲ್ ಸಾಲ್ವಡಾರ್ ಗೆ ಭೇಟಿ ನೀಡಿದ್ದ ಅವರು, ಅಮೆರಿಕದಿಂದ ತಪ್ಪಾಗಿ ಗಡಿಪಾರು ಮಾಡಲಾಗಿದ್ದ ಮೇರಿಲ್ಯಾಂಡ್ ನಿವಾಸಿ ಕಿಲ್ಮಾರ್ ಅಬ್ರೆಗೊ ಗಾರ್ಸಿಯಾ ಅವರನ್ನು ಭೇಟಿಯಾಗಿದ್ದರು. ಈ ಪ್ರಕರಣ ಅಮೆರಿಕದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಳಿಕ ಗಾರ್ಸಿಯಾ ಅಮೆರಿಕಕ್ಕೆ ಮರಳಿದ್ದರು.
ಟ್ರಂಪ್ ಅವರು ಕ್ರಿಪ್ಟೊ ಉದ್ಯಮಗಳ ಮೂಲಕ ಲಾಭ ಗಳಿಸುತ್ತಿದ್ದಾರೆ ಎಂದೂ ವ್ಯಾನ್ ಹೊಲೆನ್ ಆರೋಪಿಸಿದ್ದರು. ಸಾಮಾನ್ಯ ಕುಟುಂಬಗಳು ಜೀವನ ವೆಚ್ಚದ ಹೆಚ್ಚಳದಿಂದ ಸಂಕಷ್ಟ ಎದುರಿಸುತ್ತಿರುವಾಗ ಟ್ರಂಪ್ ಗಳಿಸಿದ ಲಾಭ 1.4 ಶತಕೋಟಿ ಡಾಲರ್ ಎಂದು ಹೇಳಿದ್ದರು. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದರು.
ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ದೋಷಾರೋಪಣೆ ಮಾಡುವ ಪ್ರಯತ್ನಗಳಿಗೂ ಬೆಂಬಲ ನೀಡಿದ್ದಾರೆ. ಇರಾನ್ ನಲ್ಲಿನ ಯುದ್ಧಕ್ಕೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವಂತೆ ಕಾಂಗ್ರೆಸ್ ಗೆ ಆಗ್ರಹಿಸಿದ್ದಾರೆ. ಯುದ್ಧಕ್ಕೆ ಹಣಕಾಸು ಒದಗಿಸುವುದನ್ನು ನಿಲ್ಲಿಸದಿದ್ದರೆ ಸರ್ಕಾರಿ ಹಣಕಾಸು ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.
ಗಾಝಾ ವಿಚಾರದಲ್ಲಿ ಅಮೆರಿಕದ ನೀತಿಗೆ ವಿರೋಧ
ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ವಿಚಾರದಲ್ಲಿ ಅಮೆರಿಕದ ಸೆನೆಟ್ ನಲ್ಲಿ ಅತ್ಯಂತ ಸಕ್ರಿಯವಾಗಿ ಧ್ವನಿ ಎತ್ತುತ್ತಿರುವ ನಾಯಕರಲ್ಲಿ ವ್ಯಾನ್ ಹೊಲೆನ್ ಕೂಡ ಒಬ್ಬರು. ಇಸ್ರೇಲ್ ನ ಕ್ರಮಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು ಮತ್ತು ಇಸ್ರೇಲ್ ಗೆ ಅಮೆರಿಕ ನೀಡುವ ಮಿಲಿಟರಿ ನೆರವಿಗೆ ಷರತ್ತು ವಿಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
2025ರ ಆಗಸ್ಟ್ನಲ್ಲಿ ಸೆನೆಟರ್ ಜೆಫ್ ಮರ್ಕ್ಲಿ ಅವರೊಂದಿಗೆ ಈಜಿಪ್ಟ್ ಮತ್ತು ಗಾಝಾ ನಡುವಿನ ರಫಾ ಗಡಿ ದಾಟುವ ಸ್ಥಳಕ್ಕೆ ಭೇಟಿ ನೀಡಿದ್ದರು. ಗಾಝಾಕ್ಕೆ ಮಾನವೀಯ ನೆರವು ತಲುಪಿಸುವುದಕ್ಕೆ ನಿರ್ಬಂಧಗಳು ಎದುರಾಗಿದ್ದ ಸಂದರ್ಭದಲ್ಲಿ ಈ ಭೇಟಿ ನಡೆದಿತ್ತು.
2026ರ ಸೆಪ್ಟೆಂಬರ್ ನಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಒಂಭತ್ತು ಅಮೆರಿಕನ್ನರ ಹತ್ಯೆ ಕುರಿತು ಅಮೆರಿಕದ ಆಡಳಿತವು ವರದಿ ಸಲ್ಲಿಸಬೇಕೆಂದು ಒತ್ತಾಯಿಸಿದ್ದರು. ಮಿಲಿಟರಿ ಬಂಧನದಲ್ಲಿರುವ ಫೆಲೆಸ್ತೀನಿಯನ್ ಮಕ್ಕಳನ್ನು ಇಸ್ರೇಲ್ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆಯೂ ವರದಿ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ, ಈ ನಿರ್ಣಯಕ್ಕೆ ಸೆನೆಟ್ ನಲ್ಲಿ ಬಹುಮತ ದೊರೆಯಲಿಲ್ಲ. ಪರವಾಗಿ 47 ಮತಗಳು ಬಿದ್ದರೆ, ವಿರುದ್ಧವಾಗಿ 53 ಮತಗಳು ಬಿದ್ದಿದ್ದವು. ಸೆನೆಟರ್ ಗಳು ಬಹುತೇಕ ಪಕ್ಷದ ಆಧಾರದ ಮೇಲೆ ಮತ ಚಲಾಯಿಸಿದ್ದರು.
ಮಧ್ಯಾವಧಿ ಚುನಾವಣೆಯಲ್ಲಿ ಡೆಮಾಕ್ರಟ್ ಗಳು ಉತ್ತಮ ಸಾಧನೆ ಮಾಡಿದರೂ ಪಕ್ಷದೊಳಗೆ ನಾಯಕತ್ವ ಬದಲಾವಣೆಯ ಬೇಡಿಕೆ ಹೆಚ್ಚಾಗಿದೆ. ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ 55 ಸ್ಥಾನಗಳನ್ನು ಗೆದ್ದಿದ್ದು, ಇನ್ನೂ ಒಂದು ಸ್ಥಾನದ ಫಲಿತಾಂಶ ಬಾಕಿಯಿದೆ ಎಂದು ಶುಮರ್ ಹೇಳಿದ್ದಾರೆ. ಚುನಾವಣೆಯ ಸಾಧನೆಯನ್ನು ಉಲ್ಲೇಖಿಸಿರುವ ಅವರು, ಪಕ್ಷದ ನಾಯಕತ್ವ ಮುಂದುವರಿಸಲು ಅಗತ್ಯವಾದ ಬೆಂಬಲ ತಮ್ಮ ಬಳಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ನಾಯಕತ್ವದ ಹೊಣೆಗಾರಿಕೆಗೆ ಸ್ಪರ್ಧಿಸಿರುವ ವ್ಯಾನ್ ಹೊಲೆನ್, ಅಮೆರಿಕದ ಜನರು ಬದಲಾವಣೆ ಬಯಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಡೆಮಾಕ್ರಟಿಕ್ ಪಕ್ಷವೂ ಹೊಸ ನಾಯಕತ್ವವನ್ನು ಹೊಂದಬೇಕು ಎಂದು ಪ್ರತಿಪಾದಿಸಿದ್ದಾರೆ.
MS ನೌ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಮತದಾರರು ಟ್ರಂಪ್ ಅವರನ್ನು ವಿರೋಧಿಸುವುದಷ್ಟೇ ಅಲ್ಲದೆ, ದೇಶದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿಯೂ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಸ್ತುತ ವ್ಯವಸ್ಥೆ ದುಡಿಯುವ ಜನರಿಗಿಂತ ಶ್ರೀಮಂತ ವರ್ಗದ ಹಿತಾಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿ ಶುಮರ್ ಅವರ ಪಾತ್ರವನ್ನೂ ಅವರು ಟೀಕಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಪಕ್ಷದ ನಾಯಕರು ನಿರ್ದಿಷ್ಟ ಅಭ್ಯರ್ಥಿಗಳ ಪರವಾಗಿ ಮಧ್ಯಪ್ರವೇಶಿಸಬಾರದು. ಎಲ್ಲರಿಗೂ ಮುಕ್ತವಾಗಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದು ಅವರ ನಿಲುವು. ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್ನರನ್ನು ಸೋಲಿಸುವುದರತ್ತ ಪಕ್ಷದ ನಾಯಕತ್ವ ಗಮನಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶುಮರ್ ಬೆಂಬಲಿಸಿದ್ದ ಅಭ್ಯರ್ಥಿಗಳು ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದಿದ್ದರೆ, ಈಗ ಸೆನೆಟರ್ ಗಳಾಗಿರುವ ಇಬ್ಬರು ನಾಯಕರು ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದೂ ವ್ಯಾನ್ ಹೊಲೆನ್ ಹೇಳಿದ್ದಾರೆ. ತಮ್ಮ ಸ್ಪರ್ಧೆ ಕೇವಲ ಒಬ್ಬ ವ್ಯಕ್ತಿಯ ವಿರುದ್ಧವಲ್ಲ, ಪಕ್ಷದಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದೆ ಎಂದಿದ್ದಾರೆ.
ಶುಮರ್ ವಿರುದ್ಧ ಬಹಿರಂಗವಾಗಿ ಸ್ಪರ್ಧೆ ಘೋಷಿಸಿದ ಮೊದಲ ಸೆನೆಟರ್ ವ್ಯಾನ್ ಹೊಲೆನ್. ಅವರ ಸ್ಪರ್ಧೆಗೆ ವರ್ಮೊಂಟ್ ನ ಸ್ವತಂತ್ರ ಸೆನೆಟರ್ ಬರ್ನಿ ಸ್ಯಾಂಡರ್ಸ್ ಬೆಂಬಲ ಸೂಚಿಸಿದ್ದಾರೆ.
ಶುಮರ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಹೇಳಿರುವ ಸ್ಯಾಂಡರ್ಸ್, ಬಿಲಿಯನೇರ್ ಗಳ ವಿರುದ್ಧ ಹೋರಾಡುವ ಪಕ್ಷವನ್ನು ಮತದಾರರು ಬಯಸುತ್ತಿದ್ದಾರೆ. ಹೀಗಾಗಿ ವ್ಯಾನ್ ಹೊಲೆನ್ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಮಿಶಿಗನ್ ನ ಅಬ್ದುಲ್ ಅಲ್-ಸಯ್ಯದ್ ಕೂಡ ವ್ಯಾನ್ ಹೊಲೆನ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇತ್ತೀಚೆಗೆ ಸೆನೆಟ್ ಗೆ ಆಯ್ಕೆಯಾಗಿರುವ ಅವರು, ಟ್ರಂಪ್ ವಾದವನ್ನು ಮತದಾರರು ತಿರಸ್ಕರಿಸಿದ್ದಾರೆ. ಆದರೆ, ಡೆಮಾಕ್ರಟಿಕ್ ಪಕ್ಷ ಇನ್ನೂ ಜನರ ವಿಶ್ವಾಸ ಗಳಿಸಿಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಕ್ಷಕ್ಕೆ ದಿಟ್ಟ ನಾಯಕತ್ವದ ಅಗತ್ಯವಿದೆ ಎಂದು ಹೇಳಿರುವ ಅವರು, ಎಪ್ರಿಲ್ ನಲ್ಲಿಯೇ ವ್ಯಾನ್ ಹೊಲೆನ್ ಅವರಿಗೆ ಬೆಂಬಲ ಸೂಚಿಸಿದ್ದಾಗಿ ತಿಳಿಸಿದ್ದಾರೆ.
75 ವರ್ಷದ ಚಕ್ ಶುಮರ್ ಅವರು 2017ರಿಂದ ಸೆನೆಟ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿದ್ದಾರೆ. ವ್ಯಾನ್ ಹೊಲೆನ್ ಅವರ ಸವಾಲಿಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪಕ್ಷದ ಭವಿಷ್ಯದ ಕುರಿತು ಚರ್ಚೆಗಳನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ತಮ್ಮ ನಾಯಕತ್ವ ಮುಂದುವರಿಸಲು ಅಗತ್ಯವಾದ ಮತಗಳು ತಮ್ಮ ಬಳಿ ಇವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಯುರೋನ್ಯೂಸ್ ವರದಿಯ ಪ್ರಕಾರ, ಶುಮರ್ ಇನ್ನೂ ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, 2025ರ ಮಾರ್ಚ್ ನಿಂದಲೇ ಡೆಮಾಕ್ರಟಿಕ್ ಪಕ್ಷದೊಳಗೆ ಕಾಣಿಸಿಕೊಂಡಿರುವ ಭಿನ್ನಮತವನ್ನು ಈ ನಾಯಕತ್ವದ ಸ್ಪರ್ಧೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
2025ರ ಮಾರ್ಚ್ ನಲ್ಲಿ ಸರ್ಕಾರಿ ವೆಚ್ಚಕ್ಕೆ ಸಂಬಂಧಿಸಿದ ಮತದಾನದಲ್ಲಿ ಶುಮರ್ ರಿಪಬ್ಲಿಕನ್ನರ ಪರ ನಿಂತಿದ್ದರು. ಇದರಿಂದ ಪಕ್ಷದೊಳಗೆ ಅಸಮಾಧಾನ ವ್ಯಕ್ತವಾಗಿತ್ತು. ಬಳಿಕ ಅವರು ತಮ್ಮ ಪಕ್ಷದೊಳಗೆ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡರು. ಕಳೆದ ವರ್ಷ ಸರ್ಕಾರದ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಡೆಮಾಕ್ರಟ್ಗಳನ್ನು ಮುನ್ನಡೆಸಿದ್ದರು. ದೊಡ್ಡ ಚುನಾವಣಾ ಗೆಲುವುಗಳನ್ನು ಸಾಧಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಡೆಮಾಕ್ರಟಿಕ್ ಪಕ್ಷದ ತಳಮಟ್ಟದಲ್ಲಿ ನಾಯಕತ್ವದ ಪೀಳಿಗೆಯ ಬದಲಾವಣೆಗೆ ಒತ್ತಡ ಹೆಚ್ಚಾಗಿದೆ. ವ್ಯಾನ್ ಹೊಲೆನ್ ಅವರಿಗೆ 67 ವರ್ಷ ವಯಸ್ಸಾಗಿದ್ದು, 75 ವರ್ಷದ ಶುಮರ್ಗಿಂತ ಕಿರಿಯರು. ಇಬ್ಬರ ನಡುವಿನ ವಯಸ್ಸಿನ ಅಂತರ ದೊಡ್ಡದಿಲ್ಲದಿದ್ದರೂ, ಪಕ್ಷದ ಹೊಸ ಮುಖವಾಗಿ ತಮ್ಮನ್ನು ವ್ಯಾನ್ ಹೊಲೆನ್ ಬಿಂಬಿಸಿಕೊಳ್ಳುತ್ತಿದ್ದಾರೆ.
ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ಶುಮರ್ ವಿರುದ್ಧದ ಈ ಸ್ಪರ್ಧೆ ಕೇವಲ ನಾಯಕತ್ವದ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲ; ಡೆಮಾಕ್ರಟಿಕ್ ಪಕ್ಷದ ಮುಂದಿನ ರಾಜಕೀಯ ದಿಕ್ಕು ಮತ್ತು ನಾಯಕತ್ವದ ಸ್ವರೂಪದ ಕುರಿತ ಹೋರಾಟವಾಗಿಯೂ ಮಹತ್ವ ಪಡೆದಿದೆ.






