2025ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮರಿಯಾ ಕೊರಿನಾ ಮಚಾದೊ ಯಾರು?

ಮರಿಯಾ ಕೊರಿನಾ ಮಚಾದೊ (Photo: PTI)
ಹೊಸದಿಲ್ಲಿ : ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡಿದ ಮರಿಯಾ ಕೊರಿನಾ ಮಚಾದೊ ಅವರು 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಾಗಿರುವ ಮರಿಯಾ ಮಚಾದೊ, ದೇಶದಲ್ಲಿ ಪ್ರಜಾಪ್ರಭುತ್ವದ ಕ್ರಾಂತಿ ಮತ್ತು ಶಾಂತಿಯನ್ನು ಪ್ರತಿಪಾದಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಮರಿಯಾ ಮಚಾದೊ ವೆನೆಜುವೆಲಾದ ಕ್ಯಾರಕಾಸ್ನಲ್ಲಿ 1967ರಲ್ಲಿ ಜನಿಸಿದರು. ಅವರು ಕೈಗಾರಿಕಾ ಎಂಜಿನಿಯರಿಂಗ್ ಪದವಿ ಮತ್ತು ಹಣಕಾಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009ರಲ್ಲಿ ಯೇಲ್ ವಿಶ್ವವಿದ್ಯಾಲಯದ ವರ್ಲ್ಡ್ ಫೆಲೋಸ್ ಪ್ರೋಗ್ರಾಂನ ಭಾಗವಾಗಿದ್ದರು.
1992ರಲ್ಲಿ ಮರಿಯಾ ಮಚಾದೊ ಅನಾಥ ಮತ್ತು ಅಪರಾಧಿ ಬೀದಿ ಮಕ್ಕಳನ್ನು ನೋಡಿಕೊಳ್ಳಲು ಅಟೆನಿಯಾ ಫೌಂಡೇಶನ್ ಅನ್ನು ಪ್ರಾರಂಭಿಸಿದರು. ವೇಲೆನ್ಸಿಯಾದಲ್ಲಿ ಆಟೋ ಉದ್ಯಮದಲ್ಲಿ ಕೆಲಸ ಮಾಡಿದ ನಂತರ ಅವರು 1993ರಲ್ಲಿ ಕ್ಯಾರಕಾಸ್ಗೆ ತೆರಳಿದರು. ಸುಮೇಟ್ ಎಂಬ ಚುನಾವಣಾ ಪಾರದರ್ಶಕತೆಯನ್ನು ಪ್ರತಿಪಾದಿಸುವ ನಾಗರಿಕ ಸಂಘಟನೆಯ ಸಹ ಸ್ಥಾಪಕಿಯಾಗಿರುವ ಮರಿಯಾ, 2002ರಲ್ಲಿ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು. 2011 ರಿಂದ 2014ರವರೆಗೆ ಅವರು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
2013ರಲ್ಲಿ ಮರಿಯಾ ಉದಾರ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗಾಗಿ ವೆಂಟೆ ವೆನೆಜುವೆಲಾ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದರು. ವೃತ್ತಿಜೀವನದುದ್ದಕ್ಕೂ ಮರಿಯಾ ಮಚಾದೊ ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದಾರೆ. ವೆನೆಜುವೆಲಾದಲ್ಲಿನ ಸರ್ವಾಧಿಕಾರಿ ಆಡಳಿತವನ್ನು ಪ್ರಶ್ನಿಸುವ ನಾಯಕಿಯಾಗಿ ಹೆಸರು ಪಡೆದಿದ್ದಾರೆ.
ವೆನೆಜುವೆಲಾದಲ್ಲಿ ಶಾಂತಿ ಮತ್ತು ಪ್ರಜಾಪ್ರಭುತ್ವದ ಸ್ಥಾಪನೆಗೆ ನಡೆಸಿದ್ದ ಅವಿರತ ಪ್ರಯತ್ನಗಳಿಗಾಗಿ ಮರಿಯಾ ಅವರನ್ನು 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು.
2024ರ ವೆನೆಜುವೆಲಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮರಿಯಾ ಮಚಾದೊ ಅವರು ವಿರೋಧ ಪಕ್ಷದವರ ಪ್ರಾಥಮಿಕ ಚುನಾವಣೆಯಲ್ಲಿ 92% ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಅವರ ಸ್ಪರ್ಧೆಯನ್ನು ನಿಷೇಧಿಸಲಾಯಿತು. ಅನರ್ಹತೆಯ ನಂತರ ಅವರು ತಮ್ಮ ಬೆಂಬಲವನ್ನು ಎಡ್ಮುಂಡೊ ಗೊನ್ಜಾಲೆಜ್ಗೆ ನೀಡಿದರು. ಅವರು ಚುನಾವಣೆಯಲ್ಲಿ 70% ಮತಗಳೊಂದಿಗೆ ಗೆದ್ದರು.
ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವ ದಣಿವರಿಯದ ಕೆಲಸಕ್ಕಾಗಿ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆ ಸಾಧಿಸುವ ನಿಟ್ಟಿನಲ್ಲಿನ ಅವರ ಹೋರಾಟಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ಕಳೆದ ವರ್ಷ ಮರಿಯಾ ವೆನೆಜುವೆಲಾದಲ್ಲಿ ತಲೆಮರೆಸಿಕೊಳ್ಳಬೇಕಾದ ಸ್ಥಿತಿ ಎದುರಾಗಿತ್ತು. ಪ್ರಾಣ ಬೆದರಿಕೆಯಿದ್ದಾಗಲೂ ಅವರು ದೇಶದಲ್ಲಿಯೇ ಉಳಿದಿದ್ದರು. ಇದರಿಂದ ಲಕ್ಷಾಂತರ ಜನರು ಸ್ಪೂರ್ತಿಗೊಂಡಿದ್ದರು. ವೆನೆಜುವೆಲಾದ ಮಿಲಿಟರೀಕರಣ ವಿರೋಧಿಸುವಲ್ಲಿ ಅವರು ಎಂದಿಗೂ ಹಿಂಜರಿದಿಲ್ಲ ಎಂದು ಪ್ರಶಸ್ತಿ ಘೋಷಿಸಿದ ಸ್ವೀಡಿಷ್ ಅಕಾಡೆಮಿ ಹೇಳಿದೆ.
ಮರಿಯಾ ಅವರು ಅಮೆರಿಕ ಪರ ಹಾಗೂ ವೆನೆಜುವೆಲಾದ ಮಡುರೊ ಅವರ ಸಮಾಜವಾದಿ ಸರಕಾರದ ವಿರೋಧಿಯಾಗಿದ್ದಾರೆ. ಪ್ರಜಾಪ್ರಭುತ್ವ ಹೋರಾಟಗಾರ್ತಿ ಎಂದು ಹೇಳಿಕೊಳ್ಳುತ್ತಿರುವ ಮರಿಯಾ ವೆನಿಜುವೆಲಾದಲ್ಲಿ ಅಮೆರಿಕ ಪರ ಸರಕಾರ ತರಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ನೊಬೆಲ್ ನೀಡಲಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಈ ಬಾರಿ ಟ್ರಂಪ್ ಗೆ ಶಾಂತಿ ನೊಬೆಲ್ ಸಿಗದಿದ್ದರೂ ಇನ್ನೊಬ್ಬ ಅಮೆರಿಕ ಪರ ಹೋರಾಟಗಾರ್ತಿಗೆ ಈ ಪ್ರಶಸ್ತಿ ಲಭಿಸಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಹಲವಾರು ಗೌರವಗಳಿಗೆ ಪಾತ್ರರಾಗಿರುವ ಮರಿಯಾ ಮಚಾದೊ 2018ರಲ್ಲಿ ಬಿಬಿಸಿಯ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟಿದ್ದಾರೆ. 2019ರಲ್ಲಿ ಲಿಬರಲ್ ಇಂಟರ್ ನ್ಯಾಷನಲ್ ಮರಿಯಾ ಅವರಿಗೆ ಸ್ವಾತಂತ್ರ್ಯ ಪ್ರಶಸ್ತಿ ನೀಡಿ ಗೌರವಿಸಿತು. ಯುರೋಪ್ ಕೌನ್ಸಿಲ್ 2024ರ ವ್ಯಾಕ್ಲಾವ್ ಹ್ಯಾವೆಲ್ ಮಾನವ ಹಕ್ಕುಗಳ ಪ್ರಶಸ್ತಿ ನೀಡಿದೆ.







