ಕೀರ್ ಸ್ಟಾರ್ಮರ್ ಸ್ಥಾನಕ್ಕೆ ಯಾರು ಬರಲಿದ್ದಾರೆ? ಬ್ರಿಟನ್ ಪ್ರಧಾನಿ ರೇಸ್ ನಲ್ಲಿರುವ ಪ್ರಮುಖ ನಾಯಕರು ಯಾರೆಲ್ಲ?

ಕೀರ್ ಸ್ಟಾರ್ಮರ್ | Photo Credit : AP , PTI
ಲಂಡನ್: ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರು ಸೋಮವಾರ ಯುಕೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದು ಲೇಬರ್ ಪಕ್ಷದೊಳಗೆ ನಾಯಕತ್ವದ ಹೋರಾಟಕ್ಕೆ ವೇದಿಕೆ ಕಲ್ಪಿಸಿದ್ದು, ಬ್ರಿಟನ್ನ ಮುಂದಿನ ಪ್ರಧಾನಿ ಯಾರು ಎಂಬುದನ್ನು ನಿರ್ಧರಿಸುವ ಸ್ಪರ್ಧೆಗೆ ನಾಂದಿ ಹಾಡಿದೆ.
10 ಡೌನಿಂಗ್ ಸ್ಟ್ರೀಟ್ನ ಹೊರಗೆ ಮಾತನಾಡಿದ ಸ್ಟಾರ್ಮರ್, ತಮ್ಮ ನಿರ್ಧಾರವನ್ನು ಕಿಂಗ್ ಚಾರ್ಲ್ಸ್–III ಅವರಿಗೆ ತಿಳಿಸಿರುವುದಾಗಿ ಹಾಗೂ ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಅಧಿಕಾರದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಸೆಪ್ಟೆಂಬರ್ನಲ್ಲಿ ಸಂಸತ್ತು ಪುನರಾರಂಭಗೊಳ್ಳುವ ಮೊದಲು ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಲೇಬರ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ (ಎನ್ಇಸಿ) ಶೀಘ್ರದಲ್ಲೇ ಚಾಲನೆ ನೀಡುವ ನಿರೀಕ್ಷೆಯಿದೆ.
ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನ, ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ‘ರಿಫಾರ್ಮ್ ಯುಕೆ’ ಪಕ್ಷದ ಬೆಳವಣಿಗೆಯನ್ನು ಎದುರಿಸುವಲ್ಲಿ ಲೇಬರ್ ಪಕ್ಷದ ಸಾಮರ್ಥ್ಯದ ಕುರಿತು ಮೂಡಿರುವ ಆತಂಕಗಳ ಬೆನ್ನಲ್ಲೇ ಪಕ್ಷದೊಳಗಿನಿಂದ ಹೆಚ್ಚಿದ ಒತ್ತಡಕ್ಕೆ ಮಣಿದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸ್ಟಾರ್ಮರ್ ರಾಜೀನಾಮೆಗೆ ಕಾರಣವೇನು?
ಸ್ಟಾರ್ಮರ್ ಅವರ ರಾಜೀನಾಮೆ ದಿಢೀರನೆ ಸಂಭವಿಸಿದ್ದೇನಲ್ಲ. ಕಳೆದ ಕೆಲವು ತಿಂಗಳುಗಳಿಂದ ಅವರದೇ ಲೇಬರ್ ಪಕ್ಷದೊಳಗಿನಿಂದ ಒತ್ತಡ ಹೆಚ್ಚಾಗುತ್ತಲೇ ಇತ್ತು. ಅವರ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದ ಎಡಪಂಥೀಯ ಸಿದ್ಧಾಂತದ ಸಂಸದರು, ಅವರು ಅಧಿಕಾರವನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿ ಕೆಳಗಿಳಿಯಬೇಕೆಂದು ಬಯಸಿದ್ದರು.
ಜುಲೈ 2024ರಲ್ಲಿ ಭರ್ಜರಿ ಜಯ ಸಾಧಿಸಿ ಸ್ಟಾರ್ಮರ್ ಅಧಿಕಾರ ವಹಿಸಿಕೊಂಡಾಗಿನಿಂದ ಪಕ್ಷದ ಜನಪ್ರಿಯತೆ ತೀವ್ರವಾಗಿ ಕುಸಿಯುತ್ತಾ ಬಂದಿದ್ದು, ಈ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ಪರಿಸ್ಥಿತಿ ಇನ್ನಷ್ಟು ಕೈಮೀರುವ ಮುನ್ನ ಸಂಸದರು ಇದನ್ನು ಸರಿಪಡಿಸಲು ಬಯಸಿದ್ದರು.
ಒಂದೆಡೆ ದಿನೇದಿನೆ ಬೆಳೆಯುತ್ತಿರುವ ‘ಗ್ರೀನ್ ಪಾರ್ಟಿ’ಗೆ ತಮ್ಮ ಉದಾರವಾದಿ ಮತದಾರರನ್ನು ಲೇಬರ್ ಪಕ್ಷ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ನೈಜೆಲ್ ಫರಾಜ್ ನೇತೃತ್ವದ ವಲಸೆ ವಿರೋಧಿ ‘ರಿಫಾರ್ಮ್ ಯುಕೆ’ ಪಕ್ಷದಿಂದಲೂ ತೀವ್ರ ಸವಾಲುಗಳನ್ನು ಎದುರಿಸುತ್ತಿರುವುದು ಪಕ್ಷಕ್ಕೆ ಆತಂಕ ಮೂಡಿಸಿದೆ.
ಜನಪ್ರಿಯತೆಯ ಈ ಕುಸಿತಕ್ಕೆ ಹಲವು ಕಾರಣಗಳಿವೆ. ಆರ್ಥಿಕ ಬೆಳವಣಿಗೆ ಇರಲಿ ಅಥವಾ ಜೀವನ ನಿರ್ವಹಣಾ ವೆಚ್ಚದ ಬಿಕ್ಕಟ್ಟಿರಲಿ, ಸ್ಟಾರ್ಮರ್ ಹಲವು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಹೆಣಗಾಡಿದ್ದಾರೆ ಎಂಬ ಟೀಕೆ ಕೇಳಿಬಂದಿದೆ. ಜನರ ಜೀವನಮಟ್ಟದಲ್ಲಿ ನಿರೀಕ್ಷಿತ ಸುಧಾರಣೆ ಕಾಣದಿರುವುದು ಹಾಗೂ ಕೆಲವು ನೀತಿ ನಿರ್ಧಾರಗಳು ಅವರ ಸರ್ಕಾರದ ಜನಪ್ರಿಯತೆಗೆ ಧಕ್ಕೆ ತಂದಿವೆ ಎನ್ನಲಾಗಿದೆ.
ವಿವಾದದ ಸುಳಿಯಲ್ಲಿದ್ದ ಮಾಜಿ ಸಂಸದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಅಮೆರಿಕಕ್ಕೆ ಯುಕೆ ರಾಯಭಾರಿಯಾಗಿ ನೇಮಿಸುವ ಮೂಲಕ ಅವರು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿಕೊಂಡರು ಎಂಬ ಟೀಕೆಯೂ ಕೇಳಿಬಂದಿದೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ನಂಟು ಬಹಿರಂಗಗೊಂಡ ನಂತರ ಮ್ಯಾಂಡೆಲ್ಸನ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತಾದರೂ, ಅಷ್ಟರಲ್ಲಾಗಲೇ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿತ್ತು ಎಂದು ವರದಿಗಳು ಹೇಳಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಹಿಂದೆ, ಸ್ಟಾರ್ಮರ್ ಅವರ ಸಂಭಾವ್ಯ ನಿರ್ಗಮನಕ್ಕೆ ವಲಸೆ ಮತ್ತು ನವೀಕರಿಸಬಹುದಾದ ಇಂಧನ ಎಂಬ ಎರಡು ಪ್ರಮುಖ ವಿಷಯಗಳೇ ಕಾರಣವಾಗಲಿವೆ ಎಂದು ಹೇಳಿದ್ದರು.
ಟೀಕೆಗಳ ನಡುವೆಯೂ, ಕೆಲವು ವಿಷಯಗಳಲ್ಲಿ ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ಗೆ ಯುರೋಪಿನ ದೇಶಗಳ ಬೆಂಬಲವನ್ನು ಕ್ರೋಡೀಕರಿಸುವಲ್ಲಿ ಹಾಗೂ ಇರಾನ್ ಯುದ್ಧದ ಪ್ರಭಾವವನ್ನು ತಗ್ಗಿಸುವ ಪ್ರಯತ್ನಗಳಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು.
ಸ್ಟಾರ್ಮರ್ ಮೇಲಿನ ಒತ್ತಡ
ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲೇಬರ್ ಪಕ್ಷ ಕಳಪೆ ಪ್ರದರ್ಶನ ನೀಡಿದ ನಂತರ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಬೆಂಬಲ ಕಳೆದುಕೊಳ್ಳುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಸ್ಟಾರ್ಮರ್ ಅವರ ನಾಯಕತ್ವ ತೀವ್ರ ಪರಿಶೀಲನೆಗೆ ಒಳಪಟ್ಟಿತ್ತು.
ಮೇಕರ್ಫೀಲ್ಡ್ ಉಪಚುನಾವಣೆಯಲ್ಲಿ ಆಂಡಿ ಬರ್ನ್ಹ್ಯಾಮ್ ಭರ್ಜರಿ ಜಯ ಸಾಧಿಸಿದ ಬಳಿಕ ಸ್ಟಾರ್ಮರ್ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಯಿತು. ಪರ್ಯಾಯ ನಾಯಕತ್ವವಿದ್ದರೆ ಮಾತ್ರ ಮತದಾರರನ್ನು ಮತ್ತೆ ಪಕ್ಷದತ್ತ ಸೆಳೆಯಲು ಸಾಧ್ಯ ಎಂಬುದಕ್ಕೆ ಈ ಗೆಲುವೇ ಸಾಕ್ಷಿ ಎಂದು ಲೇಬರ್ ಪಕ್ಷದ ಅನೇಕ ಸದಸ್ಯರು ಭಾವಿಸಿದ್ದಾರೆ.
ವರದಿಗಳ ಪ್ರಕಾರ, ಕನಿಷ್ಠ ಏಳು ಮಂದಿ ಕ್ಯಾಬಿನೆಟ್ ಸಚಿವರು ಅಧಿಕಾರದಿಂದ ಕೆಳಗಿಳಿಯುವ ಬಗ್ಗೆ ಯೋಚಿಸುವಂತೆ ಸ್ಟಾರ್ಮರ್ ಅವರಿಗೆ ವೈಯಕ್ತಿಕವಾಗಿ ಸಲಹೆ ನೀಡಿದ್ದಾರೆ. ವ್ಯಾಪಾರ ಮತ್ತು ವ್ಯವಹಾರಗಳ ಕಾರ್ಯದರ್ಶಿ ಪೀಟರ್ ಕೈಲ್ ಕೂಡ ಸ್ಟಾರ್ಮರ್ ಅವರ ಭವಿಷ್ಯದ ಕುರಿತ ಪ್ರಶ್ನೆಗಳು ಈಗ ರಾಜಕೀಯ ಚರ್ಚೆಯ ಪ್ರಮುಖ ಭಾಗವಾಗಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಮಾಜಿ ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರದ ರಕ್ಷಣಾ ವೆಚ್ಚದ ಕಾರ್ಯತಂತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಸ್ಟಾರ್ಮರ್ ವಿರುದ್ಧದ ಟೀಕೆಗಳು ಮತ್ತಷ್ಟು ತೀವ್ರಗೊಂಡಿವೆ.
ಬ್ರಿಟನ್ ಪ್ರಧಾನಿ ರೇಸ್ನಲ್ಲಿರುವವರು
ಆಂಡಿ ಬರ್ನ್ಹ್ಯಾಮ್
ಆಂಡಿ ಬರ್ನ್ಹ್ಯಾಮ್ ಅವರು ಸ್ಟಾರ್ಮರ್ ಅವರ ಉತ್ತರಾಧಿಕಾರಿಯಾಗುವ ರೇಸ್ನಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಗ್ರೇಟರ್ ಮ್ಯಾಂಚೆಸ್ಟರ್ನ ಮಾಜಿ ಮೇಯರ್ ಆಗಿದ್ದ ಇವರು, ಇತ್ತೀಚೆಗೆ ಮೇಕರ್ಫೀಲ್ಡ್ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ವೆಸ್ಟ್ಮಿನಿಸ್ಟರ್ ರಾಜಕಾರಣಕ್ಕೆ ಮರಳಿದ್ದಾರೆ.
ತಾವು ಲೇಬರ್ ಪಕ್ಷದ ನಾಯಕತ್ವದ ಸ್ಪರ್ಧೆಗೆ ಸಿದ್ಧರಿರುವುದಾಗಿಯೂ ಅವರು ಸೂಚನೆ ನೀಡಿದ್ದಾರೆ. ಲೇಬರ್ ಪಕ್ಷದ ಸದಸ್ಯರ ನಡುವೆ ಬಲವಾದ ಬೆಂಬಲ ಹೊಂದಿರುವ ಅವರು, ಸಂಭಾವ್ಯ ಉತ್ತರಾಧಿಕಾರಿಗಳ ಆಂತರಿಕ ಸಮೀಕ್ಷೆಗಳಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿದ್ದಾರೆ.
‘ರಿಫಾರ್ಮ್ ಯುಕೆ’ ಪಕ್ಷದ ಕಡೆಗೆ ವಾಲಿರುವ ಮತದಾರರನ್ನು ಮರಳಿ ಸೆಳೆಯಲು ಮತ್ತು ಲೇಬರ್ ಪಕ್ಷವನ್ನು ಮತ್ತೆ ಕಾರ್ಮಿಕ ವರ್ಗದ ಸಮುದಾಯಗಳೊಂದಿಗೆ ಜೋಡಿಸಲು ಇವರು ಸೂಕ್ತ ವ್ಯಕ್ತಿ ಎಂದು ಬೆಂಬಲಿಗರು ನಂಬಿದ್ದಾರೆ.
ವೆಸ್ ಸ್ಟ್ರೀಟಿಂಗ್
ಮಾಜಿ ಆರೋಗ್ಯ ಕಾರ್ಯದರ್ಶಿ ವೆಸ್ ಸ್ಟ್ರೀಟಿಂಗ್ ಅವರನ್ನು ಮತ್ತೊಬ್ಬ ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಸ್ಟ್ರೀಟಿಂಗ್ ಕಳೆದ ತಿಂಗಳು ಕ್ಯಾಬಿನೆಟ್ಗೆ ರಾಜೀನಾಮೆ ನೀಡಿದ್ದರು.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಸ್ಟಾರ್ಮರ್ ಮುನ್ನಡೆಸುವ ಸಾಧ್ಯತೆ ಕಡಿಮೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದರು. ಲೇಬರ್ ಸಂಸದರ ನಡುವೆ ಇವರಿಗೆ ಗಣನೀಯ ಬೆಂಬಲವಿದೆ ಎಂದು ನಂಬಲಾಗಿದ್ದು, ಉತ್ತಮ ಸಂವಹನಕಾರರಾಗಿ ಅವರು ಹೆಸರು ಗಳಿಸಿದ್ದಾರೆ.
ಆದರೆ, ಅವರ ರಾಜಕೀಯ ಸಿದ್ಧಾಂತ ಅತಿಯಾದ ಮಧ್ಯಮ ಮಾರ್ಗದ್ದಾಗಿದ್ದು, ಇದು ಲೇಬರ್ ಪಕ್ಷದ ಸಾಂಪ್ರದಾಯಿಕ ಮತದಾರರನ್ನು ದೂರ ಮಾಡಬಹುದು ಎಂದು ಕೆಲವರು ವಾದಿಸುತ್ತಾರೆ.
ಅಂಜೆಲಾ ರೇನರ್
ಅಂಜೆಲಾ ರೇನರ್ ಅವರು ಲೇಬರ್ ಪಕ್ಷದ ಅತ್ಯಂತ ಪರಿಚಿತ ಮುಖಗಳಲ್ಲಿ ಒಬ್ಬರಾಗಿದ್ದು, ಸಂಭಾವ್ಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಇವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.
ಲೇಬರ್ ಪಕ್ಷದ ಮೃದು-ಎಡಪಂಥೀಯ ಬಣದಲ್ಲಿ ಜನಪ್ರಿಯರಾಗಿರುವ ರೇನರ್, ದುಡಿಯುವ ವರ್ಗದ ಜನರ ಕಲ್ಯಾಣಕ್ಕಾಗಿ ಸರ್ಕಾರ ಇನ್ನಷ್ಟು ವೇಗವಾಗಿ ಕೆಲಸ ಮಾಡಬೇಕು ಎಂದು ಸತತವಾಗಿ ವಾದಿಸುತ್ತಾ ಬಂದಿದ್ದಾರೆ.
ಸ್ಟಾರ್ಮರ್ ವಿರುದ್ಧ ನೇರವಾಗಿ ಬಂಡಾಯ ಏಳುವುದನ್ನು ಅವರು ನಿರಾಕರಿಸಿದ್ದರೂ, ನಾಯಕತ್ವದ ಸ್ಪರ್ಧೆ ಎದುರಾದರೆ ಅದರಲ್ಲಿ ಸ್ಪರ್ಧಿಸುವುದನ್ನು ತಳ್ಳಿಹಾಕಿಲ್ಲ. ಭವಿಷ್ಯದ ಸ್ಪರ್ಧೆಯಲ್ಲಿ ಅವರು ಎಲ್ಲರ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಅಥವಾ ಆಂಡಿ ಬರ್ನ್ಹ್ಯಾಮ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಕೆಲ ಲೇಬರ್ ನಾಯಕರು ಭಾವಿಸಿದ್ದಾರೆ.
ಶಬಾನಾ ಮಹ್ಮೂದ್
ಗೃಹ ಕಾರ್ಯದರ್ಶಿ ಶಬಾನಾ ಮಹ್ಮೂದ್ ಅವರೂ ಈ ರೇಸ್ನಲ್ಲಿರುವ ಮತ್ತೊಬ್ಬ ಪ್ರಮುಖ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಲೇಬರ್ ಪಕ್ಷದ ಬಲಪಂಥೀಯ ಬಣದ ಪ್ರಭಾವಿ ನಾಯಕರ ಬೆಂಬಲ ಹೊಂದಿರುವ ಮಹ್ಮೂದ್ ಅವರನ್ನು ಪಕ್ಷದ ಭವಿಷ್ಯದ ನಾಯಕಿ ಎಂದೇ ದೀರ್ಘಕಾಲದಿಂದ ನೋಡಲಾಗುತ್ತಿದೆ.
ಇವರ ಅನುಭವ ಮತ್ತು ನೀತಿ ನಿರೂಪಣಾ ಸಾಮರ್ಥ್ಯವನ್ನು ಬೆಂಬಲಿಗರು ಶ್ಲಾಘಿಸುತ್ತಾರಾದರೂ, ವಿಮರ್ಶಕರು ಇವರನ್ನು ಅತಿಯಾದ ಮಧ್ಯಮ ಮಾರ್ಗದ ನಾಯಕಿ ಎಂದು ಪರಿಗಣಿಸುತ್ತಾರೆ.
ಅಲ್ ಕಾರ್ನ್ಸ್
ಮಾಜಿ ಸಚಿವ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಲ್ ಕಾರ್ನ್ಸ್ ಅವರನ್ನು ಈ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಅನಿರೀಕ್ಷಿತ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ಕಳೆದ ವಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ರಾಜಕೀಯ ಮಹತ್ವಾಕಾಂಕ್ಷೆಗಳ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಕಾರ್ನ್ಸ್ ನಾಯಕತ್ವದ ಸ್ಪರ್ಧೆಗೆ ಇಳಿಯುವ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ಭವಿಷ್ಯದಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
ಪಕ್ಷದ ಉನ್ನತ ಸ್ಥಾನದಲ್ಲಿ ಹೊಸ ಮುಖವನ್ನು ಬಯಸುತ್ತಿರುವ ಕೆಲವು ಲೇಬರ್ ಸದಸ್ಯರ ಗಮನವನ್ನು ಇವರ ಮಿಲಿಟರಿ ಹಿನ್ನೆಲೆ ಮತ್ತು ಶಿಸ್ತಿನ ನಡವಳಿಕೆ ಸೆಳೆದಿದೆ.
ವರದಿಗಳ ಪ್ರಕಾರ, ಸ್ಟಾರ್ಮರ್ ಅವರು ತಕ್ಷಣವೇ ರಾಜೀನಾಮೆ ನೀಡುವ ಬದಲಿಗೆ ಅಧಿಕಾರ ಹಸ್ತಾಂತರದ ಪರಿವರ್ತನಾ ವೇಳಾಪಟ್ಟಿಯನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ. ಶರತ್ಕಾಲದಲ್ಲಿ ಅವರು ಅಧಿಕಾರದಿಂದ ಕೆಳಗಿಳಿದರೆ, ಲೇಬರ್ ಪಕ್ಷಕ್ಕೆ ಹೊಸ ನಾಯಕತ್ವದ ಸ್ಪರ್ಧೆಯನ್ನು ಆಯೋಜಿಸಲು ಮತ್ತು ವರ್ಷದ ಕೊನೆಯಲ್ಲಿ ನಡೆಯುವ ಪ್ರಮುಖ ರಾಜಕೀಯ ಬೆಳವಣಿಗೆಗಳಿಗಿಂತ ಮುಂಚಿತವಾಗಿ ಸುಗಮವಾಗಿ ಅಧಿಕಾರ ಹಸ್ತಾಂತರ ಮಾಡಲು ಸಾಕಷ್ಟು ಸಮಯ ಸಿಗಲಿದೆ.
ಪ್ರಮುಖ ನಾಯಕರು ತಮ್ಮ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸುತ್ತಿರುವ ಬೆನ್ನಲ್ಲೇ, ಮುಂಬರುವ ತಿಂಗಳುಗಳು ಲೇಬರ್ ಪಕ್ಷದ ಮುಂದಿನ ನಾಯಕನನ್ನು ಮಾತ್ರವಲ್ಲದೆ ಬ್ರಿಟಿಷ್ ಸರ್ಕಾರದ ಭವಿಷ್ಯದ ದಿಕ್ಕನ್ನೂ ನಿರ್ಧರಿಸಲಿವೆ.
10 ವರ್ಷಗಳಲ್ಲಿ 6 ಪ್ರಧಾನಿಗಳು
ಕಳೆದ ಒಂದು ದಶಕದಲ್ಲಿ ಅವಧಿಪೂರ್ವವಾಗಿ ಅಧಿಕಾರದಿಂದ ನಿರ್ಗಮಿಸುತ್ತಿರುವ ಬ್ರಿಟನ್ನ ಆರನೇ ಪ್ರಧಾನಿ ಕೀರ್ ಸ್ಟಾರ್ಮರ್ ಆಗಿದ್ದಾರೆ. ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬರಲು ದೇಶದ ಜನರು ಮತ ಚಲಾಯಿಸಿದ ‘ಬ್ರೆಕ್ಸಿಟ್’ ಜನಾಭಿಪ್ರಾಯ ಸಂಗ್ರಹಣೆಯ 10ನೇ ವಾರ್ಷಿಕೋತ್ಸವದ ಒಂದು ದಿನದ ಮುಂಚೆ ಸ್ಟಾರ್ಮರ್ ಈ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಇವರಿಗಿಂತ ಮುಂಚೆ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಒಂದೂವರೆ ತಿಂಗಳಿಗಿಂತ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದರು. ರಿಷಿ ಸುನಕ್ 20 ತಿಂಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅವರಿಗಿಂತ ಮೊದಲು ಬೋರಿಸ್ ಜಾನ್ಸನ್ ಮತ್ತು ಅವರ ಮುನ್ನ ತೆರೇಸಾ ಮೇ ಪ್ರಧಾನಿಯಾಗಿದ್ದರು. ತೆರೇಸಾ ಮೇ ಬ್ರೆಕ್ಸಿಟ್ ಬಿಕ್ಕಟ್ಟಿನಿಂದ ಅಧಿಕಾರ ಕಳೆದುಕೊಂಡಿದ್ದರು. ಇವರೆಲ್ಲರಿಗಿಂತ ಮೊದಲು ಡೇವಿಡ್ ಕ್ಯಾಮರೂನ್ ಪ್ರಧಾನಿಯಾಗಿದ್ದರು. ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹಣೆಯನ್ನು ಜಾರಿಗೆ ತಂದವರೂ ಅವರೇ.






