ಭಾರತೀಯ ಕೃಷಿ ಉತ್ಪನ್ನಗಳ ರಫ್ತಿಗೆ ವಿವಿಧ ದೇಶಗಳ ತಡೆ ಯಾಕೆ?

Photo Credit ; aljazeera.com
ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ರಹಮಾನ್ಪುರ ಗ್ರಾಮದಲ್ಲಿರುವ ‘ವೇಪರ್ ಹೀಟ್ ಟ್ರೀಟ್ಮೆಂಟ್’ ((VHT) ಘಟಕವು ಹಣ್ಣು ಮತ್ತು ತರಕಾರಿಗಳನ್ನು ರೋಗಾಣುಮುಕ್ತಗೊಳಿಸುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಮಾರ್ಚ್ ತಿಂಗಳಲ್ಲಿ ಜಪಾನ್ನ ನೈರ್ಮಲ್ಯ ಪರಿಶೀಲನಾ ತಂಡವು ಅಲ್ಲಿಗೆ ಭೇಟಿ ನೀಡಿದಾಗ, ವರ್ಷದ ಅತ್ಯಂತ ಬ್ಯುಸಿ ಅವಧಿಗೆ ಘಟಕವು ಸಜ್ಜಾಗುತ್ತಿತ್ತು.
ರಫ್ತು ದಾಖಲೆಗಳ ಪರಿಶೀಲನೆ ಪೂರ್ಣಗೊಂಡು, ಹಡಗುಗಳ ಸಂಚಾರ ವೇಳಾಪಟ್ಟಿಯೂ ನಿಗದಿಯಾಗಿತ್ತು. ಮಹಾರಾಷ್ಟ್ರ ಮತ್ತು ಗುಜರಾತ್ನ ಬೆಳೆಗಾರರು ತಮ್ಮ ಅತ್ಯುತ್ತಮ ದರ್ಜೆಯ ಉನ್ನತ ಮಾರುಕಟ್ಟೆಯಾದ ಜಪಾನ್ಗೆ ರಫ್ತು ಮಾಡಲು ಆಲ್ಫೋನ್ಸೋ ಮತ್ತು ಕೇಸರ್ ತಳಿಯ ಮಾವಿನಹಣ್ಣುಗಳನ್ನು ಕಾಯ್ದಿರಿಸಿದ್ದರು.
ಸುಗ್ಗಿ ಅವಧಿ ಆರಂಭವಾಗಲು ಎಲ್ಲವೂ ಸಿದ್ಧವಾಗಿದೆ ಎನ್ನುವಾಗಲೇ ಪ್ರಕ್ರಿಯೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು. ಫ್ಯೂಮಿಗೇಷನ್, ಕ್ರಿಮಿನಾಶಕ ಪ್ರಕ್ರಿಯೆ ಹಾಗೂ ಪ್ರಮಾಣೀಕರಣ ವಿಧಾನಗಳನ್ನು ಪರಿಶೀಲಿಸಿದ ಜಪಾನ್ ತಂಡವು ಇಡೀ ಪ್ರಕ್ರಿಯೆಯ ಕುರಿತು ಆಕ್ಷೇಪ ಎತ್ತಿತು. ಇದು ಭಾರತದಿಂದ ಮಾವಿನಹಣ್ಣುಗಳ ಆಮದನ್ನು ಜಪಾನ್ ತಾತ್ಕಾಲಿಕವಾಗಿ ಅಮಾನತುಗೊಳಿಸಲು ಕಾರಣವಾಯಿತು.
ಮಾರ್ಚ್ 25 ರ ನಂತರ ನೀಡಲಾದ ತಪಾಸಣಾ ಪ್ರಮಾಣಪತ್ರಗಳನ್ನು ಹೊಂದಿರುವ ಎಲ್ಲ ಭಾರತೀಯ ಮಾವಿನಹಣ್ಣುಗಳ ರಫ್ತನ್ನು ತಡೆಯಲಾಗುವುದು ಎಂದು ಯೊಕೊಹಾಮಾ ಸಸ್ಯ ಸಂರಕ್ಷಣಾ ಪ್ರಾಧಿಕಾರ ಮಾರ್ಚ್ 31 ರಂದು ಅಧಿಕೃತ ಪತ್ರ ರವಾನಿಸಿತು. ರಫ್ತು ಕಾರ್ಯವಿಧಾನದ ಗುಣಮಟ್ಟ ಸುಧಾರಿಸಿದೆ ಎಂಬುದನ್ನು ತಪಾಸಣಾಧಿಕಾರಿಗಳು ದೃಢಪಡಿಸುವವರೆಗೆ ಈ ತಡೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿತು.
ಭಾರತ ಮತ್ತು ಜಪಾನ್ ನಡುವಿನ ಮಾವಿನಹಣ್ಣು ವ್ಯಾಪಾರದಲ್ಲಿ ಕಳೆದ ಸುಮಾರು ಎರಡು ದಶಕಗಳಲ್ಲೇ ಇದು ಮೊದಲ ದೊಡ್ಡ ಅಡಚಣೆಯಾಗಿದೆ. 1986 ರಲ್ಲಿ ಹಣ್ಣಿನ ನೊಣಗಳ ಕಾಟದ ಹಿನ್ನೆಲೆಯಲ್ಲಿ ಮಾವಿನಹಣ್ಣಿನ ಆಮದನ್ನು ನಿರ್ಬಂಧಿಸಲಾಗಿತ್ತು. ನಂತರ ವಿಎಚ್ಟಿ ಮೂಲಸೌಕರ್ಯ ನಿರ್ಮಿಸಿ, ಕೀಟ ಕಾವಲು ವ್ಯವಸ್ಥೆಯನ್ನು ಬಲಪಡಿಸಿ ಹಾಗೂ ವಾರ್ಷಿಕ ತಪಾಸಣೆಗೆ ಒಪ್ಪಿಕೊಂಡ ನಂತರ 2006 ರಲ್ಲಿ ಈ ನಿರ್ಬಂಧಗಳನ್ನು ತೆರವುಗೊಳಿಸಲಾಗಿತ್ತು.
‘ನಮಗೆ ವಿಶ್ವಾಸಾರ್ಹತೆ ತಂದುಕೊಟ್ಟಿದ್ದು ಜಪಾನ್’
ಈ ನಿರ್ಬಂಧವು ಎಪ್ರಿಲ್ನಿಂದ ಜೂನ್ವರೆಗಿನ ಪ್ರಮುಖ ರಫ್ತು ಅವಧಿಯಲ್ಲಿ ಆಲ್ಫೋನ್ಸೋ, ಕೇಸರ್, ಲಂಗಡಾ, ಬಂಗನಪಲ್ಲಿ, ಚೌಸಾ ಮತ್ತು ಮಲ್ಲಿಕಾ ಸೇರಿದಂತೆ ಅನುಮೋದಿತ ಆರು ತಳಿಯ ಮಾವಿನಹಣ್ಣುಗಳ ಮೇಲೆ ನೇರ ಪರಿಣಾಮ ಬೀರಿದೆ.
2025 ಮತ್ತು 2026 ರ ನಡುವೆ ಜಪಾನ್ ಭಾರತದಿಂದ ಸುಮಾರು 15.4 ಲಕ್ಷ ಡಾಲರ್ ಮೌಲ್ಯದ ತಾಜಾ ಮತ್ತು ಸಂಸ್ಕರಿಸಿದ ಮಾವಿನ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು. ಈ ಮೊತ್ತ ಸಣ್ಣದಾಗಿ ಕಂಡರೂ, ಜಾಗತಿಕ ವ್ಯಾಪಾರದ ದೃಷ್ಟಿಯಿಂದ ಜಪಾನ್ ಮಾರುಕಟ್ಟೆ ಅತ್ಯಂತ ಪ್ರಮುಖವಾಗಿದೆ. ಜಪಾನ್ ಮಾವಿನಹಣ್ಣಿಗೆ ಹೆಚ್ಚಿನ ಬೆಲೆ ನೀಡುತ್ತದೆ ಮತ್ತು ಜಪಾನ್ನ ಅನುಮೋದನೆಯು ಜಾಗತಿಕ ಮಟ್ಟದಲ್ಲಿ ಉತ್ಪನ್ನದ ಗುಣಮಟ್ಟಕ್ಕೆ ನೀಡುವ ಸಾಕ್ಷಿಯಾಗಿದೆ.
ಭಾರತದ ಮಾವು ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿದ್ದ ಸಮಯದಲ್ಲಿ ಈ ನಿರ್ಬಂಧ ಎದುರಾಗಿದೆ. ಕೊಂಕಣ ಪ್ರದೇಶದಲ್ಲಿ ತೀವ್ರಗೊಂಡ ಶಾಖದ ಅಲೆಯು ಮಹಾರಾಷ್ಟ್ರದ ಆಲ್ಫೋನ್ಸೋ ಬೆಳೆಯ ಬಹುಭಾಗವನ್ನು ನಾಶಪಡಿಸಿತ್ತು. ಮತ್ತೊಂದೆಡೆ, ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಾಯಿತು. ಜಪಾನಿ ಗ್ರಾಹಕರೊಂದಿಗೆ ವರ್ಷಗಟ್ಟಲೆ ಉತ್ತಮ ಬಾಂಧವ್ಯ ಹೊಂದಿದ್ದ ರಫ್ತುದಾರರು, ಒಪ್ಪಂದಗಳ ರದ್ದತಿ ಮತ್ತು ಗೋದಾಮುಗಳಲ್ಲಿ ಹಣ್ಣುಗಳು ಕೊಳೆಯುವ ಸ್ಥಿತಿಯನ್ನು ಎದುರಿಸುವಂತಾಯಿತು.
ʼಅಲ್ ಜಝೀರಾʼ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಮುಂಬೈ ಮೂಲದ ರಫ್ತುದಾರ ವಿಕ್ರಮ್ ಶಾ "ಪ್ರಮಾಣದ ದೃಷ್ಟಿಯಿಂದ ಜಪಾನ್ ನಮಗೆ ಎಂದಿಗೂ ದೊಡ್ಡ ಮಾರುಕಟ್ಟೆಯಾಗಿರಲಿಲ್ಲ, ಆದರೆ ಅದು ನಮಗೆ ಜಾಗತಿಕ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿತ್ತು ಎಂದು ಹೇಳಿದ್ದಾರೆ. ಇವರು 2025 ರಲ್ಲಿ ಜಪಾನ್ಗೆ ಸುಮಾರು 2.5 ಟನ್ ಮಾವಿನಹಣ್ಣು ರಫ್ತು ಮಾಡಿದ್ದರು. ಅಲ್ಲಿನ ಖರೀದಿದಾರರ ನಂಬಿಕೆ ಗಳಿಸಲು ನಾವು ಆರು ವರ್ಷಗಳನ್ನು ವ್ಯಯಿಸಿದ್ದೇವೆ. ನಾನು ಎರಡು ಬಾರಿ ಒಸಾಕಾಗೆ ಪ್ರಯಾಣಿಸಿ, ಆಮದುದಾರರೊಂದಿಗೆ ಚರ್ಚಿಸಿ, ಅವರ ಕೋಲ್ಡ್ ಸ್ಟೋರೇಜ್ ಗಳನ್ನು ವೀಕ್ಷಿಸಿ ಅವರ ನಿರೀಕ್ಷೆಗಳನ್ನು ಅರ್ಥೈಸಿಕೊಂಡಿದ್ದೆ. ಇಂತಹ ವ್ಯಾಪಾರ ಸಂಬಂಧಗಳನ್ನು ಕಟ್ಟಲು ವರ್ಷಗಳೇ ಬೇಕಾಗುತ್ತವೆ, ಆದರೆ ಒಂದೇ ಋತುವಿನಲ್ಲಿ ಅವು ಇಲ್ಲದಂತಾಗಬಹುದು ಎಂದಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿಯ ಆಲ್ಫೋನ್ಸೋ ಬೆಳೆಗಾರ ರಾಜೇಶ್ ಪಾಟೀಲ್, ಕೊಂಕಣ ಕರಾವಳಿ ತೀರದಲ್ಲಿರುವ ತಮ್ಮ ಮೂರು ಎಕರೆ ತೋಟದಲ್ಲಿ ಕುಟುಂಬವು ಎರಡು ತಲೆಮಾರುಗಳಿಂದ ಮಾವು ಬೆಳೆಯುತ್ತಿದೆ ಎಂದು ತಿಳಿಸಿದ್ದಾರೆ. ದೇಶೀಯ ಹರಾಜಿಗಿಂತ ಜಪಾನ್ ಮಾರುಕಟ್ಟೆಯು ಗಣನೀಯವಾಗಿ ಹೆಚ್ಚಿನ ಆದಾಯವನ್ನು ತಂದುಕೊಡುತ್ತಿತ್ತು. ಹೀಗಾಗಿ, ಜಪಾನ್ನ ಕಠಿಣ ಆಮದು ನಿಯಮಗಳನ್ನು ಪೂರೈಸಲು ತಾವು ಹೆಚ್ಚಿನ ಹೂಡಿಕೆ ಮಾಡಿದ್ದಾಗಿ ಹೇಳಿದ್ದಾರೆ.
ಜಪಾನ್ ಗುಣಮಟ್ಟಕ್ಕೆ ತಕ್ಕ ಪ್ರತಿಫಲ ನೀಡುತ್ತಿದ್ದ ಕಾರಣ ನಾವು ತೋಟವನ್ನು ಸುಧಾರಿಸಿದೆವು ಎಂದ ಪಾಟೀಲ್, "ಗ್ರೇಡಿಂಗ್ ಮತ್ತು ಹಣ್ಣುಗಳನ್ನು ನಿರ್ವಹಿಸುವ ಉಪಕರಣಗಳಿಗಾಗಿ ಸುಮಾರು 80,000 ರೂ ಖರ್ಚು ಮಾಡಿದೆ. ಕೀಟ ನಿರ್ವಹಣೆ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ, ಹಣ್ಣುಗಳನ್ನು ಕೀಳುವ ಮತ್ತು ಪ್ಯಾಕ್ ಮಾಡುವ ವಿಧಾನವನ್ನು ಬದಲಾಯಿಸಿಕೊಂಡೆ" ಎಂದು 'ಅಲ್ ಜಝೀರಾ'ಗೆ ತಿಳಿಸಿದ್ದಾರೆ.
"ದೇಶೀಯ ಮಾರುಕಟ್ಟೆಯಲ್ಲಿ ಸಿಗುವುದಕ್ಕಿಂತ ಎರಡರಷ್ಟು ಬೆಲೆಯನ್ನು ಜಪಾನ್ ನೀಡಿತ್ತು. ಇಷ್ಟೆಲ್ಲಾ ಹೂಡಿಕೆ ಮಾಡಿದಾಗ, ರಫ್ತು ವ್ಯವಸ್ಥೆಯು ನಾವು ಬೆಳೆಯುವ ಹಣ್ಣಿನಷ್ಟೇ ನಂಬಿಕಸ್ಥವಾಗಿರಬೇಕು ಎಂದು ನಾವು ನಿರೀಕ್ಷಿಸುತ್ತೇವೆ." ಎಂದಿದ್ದಾರೆ.
ಅಕ್ಕಿ ರಫ್ತಿಗೆ ಚೀನಾ ಆಕ್ಷೇಪ
ತಳೀಯವಾಗಿ ಮಾರ್ಪಡಿಸಿದ ಜೀವಿಗಳ (GMO) ಅಂಶಗಳು ಕಂಡುಬಂದಿವೆ ಎಂದು ಪ್ರತಿಪಾದಿಸಿದ ಚೀನಾದ ಸುಂಕ ವಿಭಾಗವು, ಮೂರು ಭಾರತೀಯ ಅಕ್ಕಿ ರಫ್ತುದಾರರ ರವಾನೆಗಳನ್ನು ತಿರಸ್ಕರಿಸಿದ ಬೆನ್ನಲ್ಲೇ, ಎಪ್ರಿಲ್ 17 ರಂದು ಅವರ ಆಮದು ಪರವಾನಗಿಗಳನ್ನು ರದ್ದುಗೊಳಿಸಿತು.
ಆದರೆ, ಭಾರತದಿಂದ ಸರಕು ನಿರ್ಗಮಿಸುವ ಮುನ್ನ 'ಜಿಎಮ್ಒ ಮುಕ್ತ' ಪ್ರಮಾಣಪತ್ರ ದೊರೆತಿತ್ತು ಮತ್ತು ದೇಶದ ಎಲ್ಲ ಭತ್ತದ ಗದ್ದೆಗಳು ತಳೀಯ ಮಾರ್ಪಾಡಿನಿಂದ ಮುಕ್ತವಾಗಿವೆ ಎಂದು ಭಾರತ ಸರ್ಕಾರವೂ ಹೇಳಿದೆ ಎಂದು ರಫ್ತುದಾರರು ಈ ವಾದವನ್ನು ನಿರಾಕರಿಸಿದ್ದಾರೆ.
ಭಾರತದ ಕೃಷಿ ರಫ್ತಿನಲ್ಲಿ ಅಕ್ಕಿಯ ಪಾಲು ಶೇಕಡಾ 20 ಕ್ಕಿಂತ ಹೆಚ್ಚಿದ್ದು, ಕಳೆದ ಹಣಕಾಸು ವರ್ಷದಲ್ಲಿ (2025-26) ಸಾರ್ವಕಾಲಿಕ ದಾಖಲೆಯ 1,250 ಕೋಟಿ ಡಾಲರ್ ಮೌಲ್ಯದ ಅಕ್ಕಿ ರಫ್ತಾಗಿದೆ. ಆಮದು ತಡೆ ಎದುರಿಸುತ್ತಿರುವ ಮೂರು ರಫ್ತುದಾರರು ಈಗ ಚೀನಾ ಮಾರುಕಟ್ಟೆಗೆ ಮರಳಲು ಅನಿಶ್ಚಿತತೆಯನ್ನು ಎದುರಿಸುತ್ತಿದ್ದು, ಇದು ರಫ್ತುದಾರರ ವಲಯವನ್ನು ಆತಂಕಕ್ಕೆ ದೂಡಿದೆ.
ಭಾರತದ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದ ಅಡಿಯಲ್ಲಿರುವ 'ಅಪೆಡಾ' (APEDA), ಸಂಬಂಧಪಟ್ಟ ಕಂಪನಿಗಳಿಗೆ ನೋಟಿಸ್ ನೀಡಿದ್ದು, ಚೀನಾಕ್ಕೆ ರಫ್ತಾಗುವ ಸರಕುಗಳ 'ಜಿಎಮ್ಒ' ತಪಾಸಣೆಗೆ ಅನುಮೋದಿತ ಪ್ರಯೋಗಾಲಯಗಳ ಪಟ್ಟಿಯನ್ನು ಜೂನ್ 8 ರಂದು ಪ್ರಕಟಿಸಿದೆ.
ಈ ವಿವಾದವು ಭಾರತದ ತಪಾಸಣಾ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಬಯಲುಗೊಳಿಸಿದೆ ಎಂದು ಹೊಸದಿಲ್ಲಿಯ ಕೃಷಿ ವಿಜ್ಞಾನಿ ಎಸ್. ಕೆ. ಸಿಂಗ್ ಅಲ್ ಜಝೀರಾಗೆ ತಿಳಿಸಿದ್ದಾರೆ.
"ಹೆಚ್ಚಿನ ಮಾರುಕಟ್ಟೆಗಳ ಅಗತ್ಯಕ್ಕೆ ತಕ್ಕಂತೆ ನಮ್ಮ ಪ್ರಯೋಗಾಲಯಗಳು ಕ್ರಿಮಿನಾಶಕದ ಅಂಶ ಹಾಗೂ 'ಅಫ್ಲಾಟಾಕ್ಸಿನ್' ಪರೀಕ್ಷೆಯಲ್ಲಿ ಪರಿಣತಿ ಬೆಳೆಸಿಕೊಂಡಿದ್ದವು. ಆದರೆ ಜಿಎಮ್ಒ ತಪಾಸಣೆಗಾಗಿ ಚೀನಾ ಉನ್ನತ ಮಟ್ಟದ ಸಾಮರ್ಥ್ಯವನ್ನು ನಿರೀಕ್ಷಿಸುತ್ತದೆ" ಎಂದು ಅವರು ಹೇಳಿದ್ದಾರೆ.
ರಫ್ತುದಾರರ ಪ್ರಮಾಣಪತ್ರಗಳು ಅನುಮೋದಿತ ಪ್ರಯೋಗಾಲಯಗಳಿಂದಲೇ ಬಂದಿದ್ದರೂ, ತಪಾಸಣಾ ಜಾಲದ ವಿಸ್ತರಣೆ ಸಮಾನವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಅಗತ್ಯವಿರುವ ಪ್ರೋಟೀನ್ ವಿಶ್ಲೇಷಣೆ ನಡೆಸುವ ಕೆಲವೇ ಕೆಲವು ಕೇಂದ್ರಗಳು ಹೊಸದಿಲ್ಲಿ ಮತ್ತು ಹೈದರಾಬಾದ್ನಲ್ಲಿ ಕೇಂದ್ರೀಕೃತವಾಗಿವೆ. ಇದರಿಂದಾಗಿ ಉತ್ತರ ಭಾರತದ ಪಂಜಾಬ್ ಮತ್ತು ಹರಿಯಾಣದ ರಫ್ತುದಾರರು ಮಾದರಿಗಳನ್ನು ನೂರಾರು ಕಿಲೋಮೀಟರ್ ದೂರಕ್ಕೆ ಕಳುಹಿಸಬೇಕಾದ ಸ್ಥಿತಿಯಿದೆ.
ಬಿಕ್ಕಟ್ಟು ಎದುರಾಗುವ ಮುನ್ನವೇ ಎಚ್ಚರಿಕೆಯ ಸಂಕೇತ ಕಂಡಿತ್ತು:
ಮಾವು ಮತ್ತು ಅಕ್ಕಿ ರಫ್ತಿನಲ್ಲಿ ಬಿಕ್ಕಟ್ಟು ಎದುರಾಗುವ ಮುನ್ನವೇ ಇತರ ಎಚ್ಚರಿಕೆಯ ಸಂಕೇತಗಳು ಕಂಡುಬಂದಿದ್ದವು.
ಕ್ರಿಮಿನಾಶಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್ ಹಲವು ಭಾರತೀಯ ಸಾಂಬಾರು ಪದಾರ್ಥಗಳ ಮಾರಾಟವನ್ನು ನಿರ್ಬಂಧಿಸಿತ್ತು. ತಪಾಸಣೆಯ ವೇಳೆ ಶೇಕಡಾ 12 ರಷ್ಟು ಮಾದರಿಗಳಲ್ಲಿ ಗುಣಮಟ್ಟದ ಕೊರತೆ ಕಂಡುಬಂದಿತ್ತು. 2024 ರಲ್ಲಿ ತನ್ನ ಕಟ್ಟುನಿಟ್ಟಿನ ತಪಾಸಣಾ ವ್ಯವಸ್ಥೆಯಡಿ ಸಾಂಬಾರು ಪದಾರ್ಥಗಳಿಗೆ ಸಂಬಂಧಿಸಿದಂತೆ 312 ಎಚ್ಚರಿಕೆಗಳನ್ನು ದಾಖಲಿಸಿದ್ದ ಯುರೋಪಿಯನ್ ಯೂನಿಯನ್, 2025 ರ ಜನವರಿಯಲ್ಲಿ ಭಾರತದ ಜೀರಿಗೆ ಮೇಲಿನ ತಪಾಸಣಾ ಪ್ರಮಾಣವನ್ನು ಶೇಕಡಾ 30 ಕ್ಕೆ ಹೆಚ್ಚಿಸಿತು.
ಕೇರಳದ ಕೊಚ್ಚಿಯ ಆಹಾರ ಸುರಕ್ಷತಾ ವಿಜ್ಞಾನಿ ಅನನ್ಯಾ ಬೋಸ್, ಈ ಸಮಸ್ಯೆಯ ಮೂಲವನ್ನು ಅಸಂಘಟಿತ ಪೂರೈಕೆ ಶೃಂಖಲೆಯಲ್ಲಿ ಗುರುತಿಸಿದ್ದಾರೆ.
"ರೈತ ತನ್ನ ಬೆಳೆಯನ್ನು ಮಧ್ಯವರ್ತಿಗೆ ಮಾರಾಟ ಮಾಡುತ್ತಾನೆ. ಆತ ವ್ಯಾಪಾರಿಗೆ ಮಾರಿದರೆ, ವ್ಯಾಪಾರಿಯು ಸಂಸ್ಕರಣಾಗಾರರಿಗೆ ಪೂರೈಸುತ್ತಾನೆ. ಈ ಶೃಂಖಲೆಯ ಯಾವುದೋ ಹಂತದಲ್ಲಿ ಬೆಳೆಯ ಮೇಲೆ ಯಾವ ರಾಸಾಯನಿಕ ಸಿಂಪಡಿಸಲಾಗಿತ್ತು ಎಂಬ ದಾಖಲೆಯೇ ಇಲ್ಲದಂತಾಗುತ್ತದೆ. ಮೊದಲ ಮಾರಾಟದವರೆಗೆ ಮಾತ್ರ ಮಾಹಿತಿ ಇರುತ್ತದೆ, ನಂತರ ಅದು ಪತ್ತೆಯಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
ವಿದೇಶಿ ನಿಯಂತ್ರಕರು ಹೊಲದಿಂದ ರಫ್ತಿನವರೆಗೆ ಪ್ರತಿಯೊಂದು ಹಂತದ ಸ್ಪಷ್ಟ ಮಾಹಿತಿಯನ್ನು ಬಯಸುತ್ತಾರೆ. ಆದರೆ ಇದನ್ನು ಅನೇಕ ರಾಜ್ಯಗಳು ಇನ್ನೂ ಐಚ್ಛಿಕ ನಿಯಮವೆಂದೇ ಪರಿಗಣಿಸಿವೆ. ಹೀಗಾಗಿ ಕಡ್ಡಾಯ ಡಿಜಿಟಲ್ ಕ್ರಿಮಿನಾಶಕ ದಾಖಲೆ ವ್ಯವಸ್ಥೆಗಾಗಿ ಬೋಸ್ ಒತ್ತಾಯಿಸಿದ್ದಾರೆ.
ಈ ಹಿನ್ನಡೆಗಳು ಪ್ರತ್ಯೇಕ ಘಟನೆಗಳಂತೆ ಕಂಡರೂ, ಭಾರತದ ಕೃಷಿ ಸಾಮರ್ಥ್ಯ ಹಾಗೂ ಜಪಾನ್, ಯುರೋಪಿಯನ್ ಯೂನಿಯನ್, ಬ್ರಿಟನ್, ಅಮೆರಿಕ ಮತ್ತು ಕೆನಡಾ ದೇಶಗಳು ನಿರೀಕ್ಷಿಸುವ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಮಟ್ಟದ ನಡುವಿನ ಅಂತರವನ್ನು ಬಿಚ್ಚಿಡುತ್ತವೆ. ಗ್ರಾಹಕರ ಜಾಗೃತಿ, ಹವಾಮಾನ ವೈಪರೀತ್ಯದಿಂದ ಹೆಚ್ಚುತ್ತಿರುವ ಕೀಟಬಾಧೆ ಹಾಗೂ ಆಹಾರ ಸುರಕ್ಷತಾ ತಂತ್ರಗಳ ಕಾರಣದಿಂದಾಗಿ ಈ ದೇಶಗಳು ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿವೆ.
ಇದೇ ವೇಳೆ, ಥೈಲ್ಯಾಂಡ್ ದೇಶಾದ್ಯಂತ ಕೃಷಿ ಮಾಹಿತಿ ಪತ್ತೆ ವ್ಯವಸ್ಥೆಯನ್ನು ನಿರ್ಮಿಸಿದ್ದರೆ, ವಿಯೆಟ್ನಾಂ ರೈತರ ತರಬೇತಿಯಲ್ಲಿ ಹೂಡಿಕೆ ಮಾಡಿದೆ. ಬ್ರೆಜಿಲ್ ಮತ್ತು ಚಿಲಿ ದೇಶಗಳು ಕೋಲ್ಡ್ ಸ್ಟೋರೇಜ್ ಜಾಲಕ್ಕಾಗಿ ಹೆಚ್ಚಿನ ಹಣ ವಿನಿಯೋಗಿಸಿ ವೇಗವಾಗಿ ಮುನ್ನಡೆದಿವೆ.
ಆದರೆ ಭಾರತದಲ್ಲಿ ಪ್ರಗತಿಯು ಮಂದಗತಿಯಲ್ಲಿದೆ. ದೇಶದಲ್ಲಿ ನೋಂದಾಯಿತ 207 ಪ್ಯಾಕಿಂಗ್ ಕೇಂದ್ರಗಳಿದ್ದು, ಅವುಗಳಲ್ಲಿ ಶೇಕಡಾ 72 ರಷ್ಟು ಮಹಾರಾಷ್ಟ್ರದಲ್ಲೇ ಕೇಂದ್ರೀಕೃತವಾಗಿವೆ. ಕೋಲ್ಡ್ ಸ್ಟೋರೇಜ್ ಗಳ ಕೊರತೆ ಮತ್ತು ಸರಕು ಸಾಗಣೆ ವೆಚ್ಚವು ರಫ್ತು ಮೌಲ್ಯದ ಶೇಕಡಾ 15 ರಷ್ಟನ್ನು ನುಂಗಿಹಾಕುತ್ತದೆ. ಇದು ಅಭಿವೃದ್ಧಿ ಹೊಂದಿದ ದೇಶಗಳ ವೆಚ್ಚಕ್ಕಿಂತ ಸುಮಾರು ಎರಡರಷ್ಟಾಗಿದೆ. ಭಾರತದಲ್ಲಿ ಶೇಕಡಾ 86 ಕ್ಕೂ ಹೆಚ್ಚು ರೈತರು 2 ಹೆಕ್ಟೇರ್ಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಹಿಡುವಳಿದಾರರಾಗಿದ್ದು, ಬೃಹತ್ ಮಟ್ಟದಲ್ಲಿ ಏಕರೂಪದ ಗುಣಮಟ್ಟ ಕಾಯ್ದುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
"ಉನ್ನತ ದರ್ಜೆಯ ಮಾರುಕಟ್ಟೆಗಳು ಜಾಗತಿಕ ಗುಣಮಟ್ಟವನ್ನು ಅಪೇಕ್ಷಿಸಿದರೆ, ಭಾರತವು ಉತ್ಪಾದನೆಯನ್ನು ಹೆಚ್ಚಿಸುವುದಕ್ಕಷ್ಟೇ ತನ್ನ ಕಾರ್ಯತಂತ್ರವನ್ನು ಸೀಮಿತಗೊಳಿಸಿಕೊಂಡಿದೆ," ಎಂದು ಕೃಷಿ ಅರ್ಥಶಾಸ್ತ್ರಜ್ಞ ಅನಿಲ್ ಗುಪ್ತಾ 'ಅಲ್ ಜಝೀರಾ'ಗೆ ತಿಳಿಸಿದ್ದಾರೆ.
ಭಾರತ ಸಾಧಿಸಿರುವ ಕೆಲವು ಪ್ರಮುಖ ಪ್ರಗತಿಗಳನ್ನು ಉಲ್ಲೇಖಿಸಿದ ಗುಪ್ತಾ ಕಳೆದ ದಶಕದಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯಗಳ ಸಂಖ್ಯೆ 22 ರಿಂದ 89 ಕ್ಕೆ ಏರಿದೆ ಮತ್ತು ರಫ್ತು ಪ್ರಮಾಣಪತ್ರಗಳ ಸಂಖ್ಯೆ ಸುಮಾರು 61,000 ರಿಂದ 1.7 ಲಕ್ಷಕ್ಕೂ ಅಧಿಕಗೊಂಡಿದೆ ಎಂದಿದ್ದಾರೆ.
"ಈ ಸುಧಾರಣೆಗಳು ಗಮನಾರ್ಹ ಹೌದಾದರೂ, ಸವಾಲುಗಳ ವ್ಯಾಪ್ತಿಯೂ ಅಷ್ಟೇ ದೊಡ್ಡದಾಗಿದೆ. ಸಾಧಿಸಿದ ಪ್ರಗತಿಯು ಕೇವಲ ಆರಂಭವಷ್ಟೇ, ನಾವು ತಲುಪಬೇಕಾದ ಗುರಿ ಇನ್ನೂ ದೂರವಿದೆ" ಎಂದು ಅವರು ಹೇಳಿದ್ದಾರೆ.
ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿ ಉಜ್ವಲ್ ಕುಮಾರ್ ಘೋಷ್, ಸಾಂಬಾರು ಪದಾರ್ಥಗಳು, ಚಹಾ, ಹಣ್ಣು ಮತ್ತು ತರಕಾರಿಗಳಲ್ಲಿ ಬಳಸುವ ಆಂಟಿಬಯೋಟಿಕ್ ಅಂಶಗಳು, ಕ್ರಿಮಿನಾಶಕಗಳು ಮತ್ತು 'ಅಫ್ಲಾಟಾಕ್ಸಿನ್' ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಯೋಗಾಲಯಗಳ ದರ್ಜೆ ಏರಿಸಲು ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿರುವ ಅವರು, ನಿರ್ದಿಷ್ಟ ಕಾಲಮಿತಿಯನ್ನು ಉಲ್ಲೇಖಿಸಿಲ್ಲ.
"ತಪಾಸಣೆಯಿಂದ ಹಿಡಿದು ಪರಿಶೀಲನೆ ಮತ್ತು ಪೂರೈಕೆ ಮಾಹಿತಿಯವರೆಗೆ ಇಡೀ ವ್ಯವಸ್ಥೆಯನ್ನು ಸರ್ಕಾರ ಬಲಪಡಿಸುತ್ತಿದೆ. ಕ್ರಿಮಿನಾಶಕಗಳ ನಿಯಂತ್ರಣವನ್ನು ಕಠಿಣಗೊಳಿಸುವುದು, ಪ್ರಯೋಗಾಲಯಗಳ ಸಾಮರ್ಥ್ಯ ವಿಸ್ತರಿಸುವುದು, ಅಪಾಯ ಆಧಾರಿತ ತಪಾಸಣೆ ಮತ್ತು ಡಿಜಿಟಲ್ ವ್ಯವಸ್ಥೆಗಳ ಮೂಲಕ ಲೋಪಗಳನ್ನು ಶೀಘ್ರ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಕಠಿಣ ಜಾಗತಿಕ ನಿಯಮಗಳನ್ನು ಪೂರೈಸಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಹಿಡಿತವನ್ನು ಕಾಯ್ದುಕೊಳ್ಳಲು ರಫ್ತುದಾರರಿಗೆ ನೆರವಾಗುವುದೇ ಇದರ ಮುಖ್ಯ ಉದ್ದೇಶ" ಎಂದು ಘೋಷ್ ಹೇಳಿದ್ದಾರೆ.
ವಿಶ್ವದ ಎರಡನೇ ಅತಿ ದೊಡ್ಡ ಕೃಷಿ ಉತ್ಪಾದಕ ದೇಶವಾಗಿದ್ದರೂ, ಜಾಗತಿಕ ಕೃಷಿ ರಫ್ತಿನಲ್ಲಿ ಭಾರತದ ಪಾಲು ಕೇವಲ ಶೇಕಡಾ 2.4 ರಷ್ಟಿದೆ. ಸಂಸ್ಕರಿಸಿದ ಉತ್ಪನ್ನಗಳ ರಫ್ತು ಶೇಕಡಾ 17 ರಷ್ಟಿದ್ದು, ಅಮೆರಿಕದ ಶೇಕಡಾ 25 ಮತ್ತು ಚೀನಾದ ಶೇಕಡಾ 50 ಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ.
ಈ ಹಿನ್ನಡೆಯ ನೇರ ಪರಿಣಾಮವನ್ನು ಬೆಳೆಗಾರರು ಅನುಭವಿಸುತ್ತಿದ್ದಾರೆ.
ಗುಜರಾತ್ನ ಕೇಸರ್ ಮಾವು ಬೆಳೆಗಾರರು ತಮ್ಮ ಪ್ರಮುಖ ಜಪಾನಿ ಖರೀದಿದಾರರನ್ನು ಕಳೆದುಕೊಂಡಿದ್ದಾರೆ. ಹರಿಯಾಣದ ಕರ್ನಾಲ್ನ ಬಾಸ್ಮತಿ ಅಕ್ಕಿ ಬೆಳೆಗಾರರೊಬ್ಬರು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಗಳು ಈಗಾಗಲೇ ಶೇಕಡಾ 8 ರಷ್ಟು ಕುಸಿದಿವೆ ಎಂದಿದ್ದಾರೆ. ಇನ್ನು ತಮಿಳುನಾಡಿನ ಈರೋಡ್ನ ಅರಿಶಿನ ಸಂಸ್ಕರಣಾಗಾರರೊಬ್ಬರು, ಕ್ರಿಮಿನಾಶಕ ತಪಾಸಣೆಗೆ ಕಳೆದ ತ್ರೈಮಾಸಿಕದಲ್ಲಿ 15,000 ರೂಪಾಯಿ ವೆಚ್ಚ ಮಾಡಿದ್ದು, ಇದು ತಮ್ಮ ಲಾಭದ ಸುಮಾರು ಶೇಕಡಾ 10 ರಷ್ಟಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ದೇಶದ ಶೇಕಡಾ 42 ರಷ್ಟು ಕಾರ್ಮಿಕರಿಗೆ ಕೃಷಿ ವಲಯವೇ ಉದ್ಯೋಗ ನೀಡುತ್ತಿದ್ದರೂ, ರಾಷ್ಟ್ರೀಯ ಒಟ್ಟು ಉತ್ಪಾದನೆಯಲ್ಲಿ ಇದರ ಪಾಲು ಐದನೇ ಒಂದಕ್ಕಿಂತ ಕಡಿಮೆಯಿದೆ.
"ಇದು ಕೇವಲ ಕೆಲವು ರಫ್ತು ಸರಕುಗಳು ತಿರಸ್ಕೃತಗೊಂಡ ವಿಚಾರವಷ್ಟೇ ಅಲ್ಲ. ಜಾಗತಿಕ ಖರೀದಿದಾರರು ನಿರೀಕ್ಷಿಸುವ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳುವ ದೇಶಗಳು ಮಾತ್ರ ಯಶಸ್ಸು ಕಾಣುತ್ತವೆ," ಎಂದು ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ರೈತರು ಜಗತ್ತಿಗೆ ಬೇಕಾದ ಬೆಳೆಯನ್ನು ಬೆಳೆಯಬಲ್ಲರು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆ ನಮ್ಮ ಉತ್ಪನ್ನಗಳನ್ನು ನಿರಂತರವಾಗಿ ಖರೀದಿಸುವಂತೆ ಮಾಡುವ ವಿಶ್ವಾಸಾರ್ಹ ವ್ಯವಸ್ಥೆಯನ್ನು ರೂಪಿಸುವುದಷ್ಟೇ ಈಗಿನ ಮುಖ್ಯ ಸವಾಲಾಗಿದೆ.
ಕೃಪೆ: aljazeera.com






