ನ್ಯೂಯಾರ್ಕ್ ಆವರಿಸಿದ ಕಾಡ್ಗಿಚ್ಚಿನ ಹೊಗೆ : ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಪಾಯ?

Photo Credit : AP
ನ್ಯೂಯಾರ್ಕ್, ಜು.17: ಕೆನಡಾದ ಕಾಡ್ಗಿಚ್ಚಿನಿಂದ ಬಂದ ಹೊಗೆಯು ಈ ವಾರ ನ್ಯೂಯಾರ್ಕ್ ನಗರ ಪ್ರದೇಶವನ್ನು ಆವರಿಸಿಕೊಂಡಿದೆ. ವಾಯು ಗುಣಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು ರವಿವಾರ ಹತ್ತಿರದ ನ್ಯೂಜೆರ್ಸಿಯಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯಕ್ಕೆ ಅಡ್ಡಿಯಾಗಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸ್ಪೇನ್ ಮತ್ತು ಅರ್ಜೆಂಟೀನಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯವು ರವಿವಾರ ಮಧ್ಯಾಹ್ನ ನ್ಯೂಜೆರ್ಸಿಯ ಈಸ್ಟ್ ರುದರ್ಫೋರ್ಡ್ನಲ್ಲಿರುವ ಮೆಟ್ಲೈಫ್ ಸ್ಟೇಡಿಯಂನಲ್ಲಿ ನಡೆಯಲು ನಿಗದಿಯಾಗಿದೆ.
ಶುಕ್ರವಾರ ಬೆಳಿಗ್ಗೆ, ಈಸ್ಟ್ ರುದರ್ಫೋರ್ಡ್ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸುಮಾರು 160ರಷ್ಟಿತ್ತು. ಸರಕಾರದ ಟ್ರ್ಯಾಕಿಂಗ್ ವೆಬ್ಸೈಟ್ ಪ್ರಕಾರ ಇದನ್ನು `ಅನಾರೋಗ್ಯಕರ' ಎಂದು ಪರಿಗಣಿಸಲಾಗುತ್ತದೆ. ಪರಿಸರ ಸಂರಕ್ಷಣಾ ಸಂಸ್ಥೆಯು ಎಲ್ಲಾ ವ್ಯಕ್ತಿಗಳೂ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡುತ್ತದೆ.
ರವಿವಾರದ ವೇಳೆಗೆ ಹೊಗೆ ಸಂಪೂರ್ಣವಾಗಿ ಇಲ್ಲವಾಗುತ್ತದೆ ಎಂದು ನ್ಯೂಯಾರ್ಕ್ ನಗರದ ಹವಾಮಾನ ತಜ್ಞ ಜಾನ್ ಡಾವಿಟ್ ತಿಳಿಸಿದ್ದಾರೆ. ರವಿವಾರ ಈಸ್ಟ್ ರುದರ್ಫೋರ್ಡ್ನಲ್ಲಿ ಬಿಸಿಲಿನ ವಾತಾವರಣ ಇರಲಿದ್ದು, ವಾಯು ಗುಣಮಟ್ಟ ಸುಧಾರಿಸಲಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಹೇಳಿದೆ. ರವಿವಾರ ವಾಯು ಗುಣಮಟ್ಟದ ಸಮಸ್ಯೆ ಉಂಟಾದರೆ ಫಿಫಾ (ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ) ಹೇಗೆ ನಿಭಾಯಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.






