ಮುಂದುವರಿದ ಇಸ್ರೇಲ್ ರಾಜಕೀಯ ಬಿಕ್ಕಟ್ಟು: ಪ್ರಧಾನಿ ಹುದ್ದೆಗೆ ನೆತನ್ಯಾಹು ಹಾದಿ ದುರ್ಗಮ?
‘ತಟಸ್ಥ’ನಿಲುವು ತಳೆಯುವುದಾಗಿ ಕಟ್ಟರ್ ಯಹೂದಿ ಪಕ್ಷ ಘೋಷಣೆ: ಇಸ್ರೇಲಿ ಅರಬ್ ಪಕ್ಷದಿಂದ ಐಸೆನ್ಕೋಟ್ಗೆ ಬೆಂಬಲ ಘೋಷಣೆ

ಬೆಂಜಮಿನ್ ನೆತಾನ್ಯಾಹು | Photo Credit : AP
ಟೆಲ್ಅವೀವ್: ಇಸ್ರೇಲ್ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಪ್ರಧಾನಿ ಪಟ್ಟಕ್ಕೆ ಮರಳಿ ಏರಲು ಕಸರತ್ತು ನಡೆಸುತ್ತಿರುವ ಬೆಂಜಮಿನ್ ನೆತನ್ಯಾಹು ಅವರ ಹಾದಿ ತೀರಾ ಕಠಿಣವಾಗಿದೆ. ನೆತನ್ಯಾಹು ಅವರ ಪ್ರಬಲ ಮಿತ್ರಪಕ್ಷ ‘ಕಟ್ಟರ್ ಯಹೂದಿ ಪಕ್ಷ’ವೊಂದು ಯಾವುದೇ ಅಭ್ಯರ್ಥಿಗೆ ಬೆಂಬಲ ಸೂಚಿಸದೆ ತಟಸ್ಥ ನಿಲುವನ್ನು ತಳೆದಿದೆ. ಇದೇ ವೇಳೆ ಪ್ರಮುಖ ಅರಬ್ ಪಕ್ಷವೊಂದು, ನೆತನ್ಯಾಹು ಅವರ ಪ್ರಮುಖ ಪ್ರತಿಸ್ಪರ್ಧಿಯಾದ ಗಾಡಿ ಐಸೆನ್ಕೋಟ್ ಅವರಿಗೆ ಬೆಂಬಲ ಘೋಷಿಸಿರುವುದು, ಇಸ್ರೇಲ್ನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ನೆತನ್ಯಾಹು ಅವರ ದೀರ್ಘಕಾಲದ ಮಿತ್ರಪಕ್ಷವಾದ ‘ಯುನೈಟೆಡ್ ತೋರಾಹ್ ಜುದಾಯಿಸಂ’, ಸರಕಾರ ರಚನೆಗೆ ಯಾವುದೇ ಅಭ್ಯರ್ಥಿಯನ್ನು ಶಿಫಾರಸು ಮಾಡಲು ನಿರಾಕರಿಸಿರುವುದು ನೆತನ್ಯಾಹು ಅವರಿಗೆ ಭಾರೀ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಈ ಮಧ್ಯೆ ಇಸ್ರೇಲ್ನ ಎರಡು ಪ್ರಮುಖ ಅರಬ್ ಪಕ್ಷಗಳ ಜೊತೆ ಸರಕಾರ ರಚನೆಯ ಸಾಧ್ಯತೆಯನ್ನು ಗಾಡಿ ಐಸೆನ್ಕೋಟ್ ತಳ್ಳಿಹಾಕಿರುವರಾದರೂ, ಅವರಿಗೆ ಬೆಂಬಲ ನೀಡಲು ಅರಬ್ ಪಕ್ಷವೊಂದು ಮುಂದೆ ಬಂದಿದೆ. ಇನ್ನೊಂದು ಅರಬ್ ಪಕ್ಷ ಕೂಡಾ ಬೆಂಬಲ ನೀಡುವ ಸಾಧ್ಯತೆಯಿದ್ದು, ಇದು ಪ್ರತಿಪಕ್ಷಗಳಲ್ಲಿ ಹುರುಪು ಮೂಡಿಸಿದೆ.
ಇಸ್ರೇಲ್ನಲ್ಲಿ ಉಂಟಾಗಿರುವ ರಾಜಕೀಯ ಅತಂತ್ರ ಸ್ಥಿತಿಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಧ್ಯಕ್ಷ ಐಸಾಕ್ ಹರ್ಝಾಗ್ ಅವರು ಈಗಾಗಲೇ ಸಣ್ಣಪುಟ್ಟ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸರಕಾರ ರಚನೆಗೆ ಬೇಕಾದ ಬಹುಮತವನ್ನು ಸಾಬೀತುಪಡಿಸಲು ಯಾರಿಗೆ ಉತ್ತಮ ಅವಕಾಶವಿದೆಯೆಂಬುದನ್ನು ನಿರ್ಧರಿಸಿ, ಅವರಿಗೆ ಆಹ್ವಾನ ನೀಡಲು ಇಸ್ರೇಲ್ ಅಧ್ಯಕ್ಷರಿಗೆ ನವೆಂಬರ್ 11ರ ತನಕ ಕಾಲಾವಕಾಶವಿದೆ. ಗುರುವಾರ ರಾತ್ರಿ ಇಸ್ರೇಲ್ ಅಧ್ಯಕ್ಷರು, ನೆತನ್ಯಾಹು ಹಾಗೂ ಐಸೆನ್ಕೋಟ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಕ್ಟೋಬರ್ 27ರಂದು ನಡೆದ ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷವು 120 ಸ್ಥಾನಗಳ ನೆಸ್ಸೆಟ್ (ಸಂಸತ್)ನಲ್ಲಿ 27 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅವರ ನೇತೃತ್ವದ ಮೈತ್ರಿಕೂಟವು ಒಟ್ಟು 53 ಸ್ಥಾನಗಳನ್ನಷ್ಟೇ ಪಡೆದಿದ್ದು, ಸರಕಾರ ರಚನೆಗೆ ಅಗತ್ಯವಿರುವ ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದೆ. ಐಸೆನ್ಕೋಟ್ ಬಣವು 48 ಸ್ಥಾನಗಳಲ್ಲಿ ಜಯಗಳಿಸಿದೆ. ಇಸ್ರೇಲ್ನಲ್ಲಿನ ಅರಬ್ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಅರಬ್ ಪಕ್ಷಗಳು 19 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿವೆ.






