ಇರಾನ್ ಮೇಲೆ ದಾಳಿ ಮಾಡದಿದ್ದರೆ ಇಸ್ರೇಲ್, ಮಧ್ಯಪ್ರಾಚ್ಯವೇ ಇರುತ್ತಿರಲಿಲ್ಲ: ಡೊನಾಲ್ಡ್ ಟ್ರಂಪ್
'ಚುನಾವಣಾ ಸೋಲಿಗೆ ಯುದ್ಧದ ವಿರುದ್ಧದ ಜನಾಕ್ರೋಶವೂ ಕಾರಣ!'

ಡೊನಾಲ್ಡ್ ಟ್ರಂಪ್ | Photo credit : PTI
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ನಡೆಸಿದ ದಾಳಿ ಇಸ್ರೇಲ್ ಮಾತ್ರವಲ್ಲ, ಇಡೀ ಮಧ್ಯಪ್ರಾಚ್ಯದ ಅಸ್ತಿತ್ವವನ್ನೇ ಉಳಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಇರಾನ್ ಮೇಲೆ ದಾಳಿ ನಡೆಸದಿದ್ದರೆ ಇಂದು ಇಸ್ರೇಲ್ ಮತ್ತು ಮಧ್ಯಪ್ರಾಚ್ಯವೇ ಅಸ್ತಿತ್ವದಲ್ಲಿರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಯುದ್ಧವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದು ಅತ್ಯಗತ್ಯವಾಗಿತ್ತು ಎಂದು ಹೇಳಿದ್ದಾರೆ.
ತಮ್ಮ 'ಟ್ರೂತ್ ಸೋಶಿಯಲ್' ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, "ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ನಾನು ತಡೆಯದಿದ್ದರೆ, ಇಸ್ರೇಲ್ ಮತ್ತು ವಾಸ್ತವವಾಗಿ ಇಡೀ ಮಧ್ಯಪ್ರಾಚ್ಯವೇ ಇಂದು ಅಸ್ತಿತ್ವದಲ್ಲಿರುತ್ತಿರಲಿಲ್ಲ. ಈ ವಿಷಯವನ್ನು ಯಾರೂ ಹೇಳಲು ಬಯಸುವುದಿಲ್ಲ. ಆದರೆ, ಇದು ಸತ್ಯ ಎಂಬುದು ಎಲ್ಲರಿಗೂ ತಿಳಿದಿದೆ" ಎಂದು ಹೇಳಿದ್ದಾರೆ.
ಇದೇ ವೇಳೆ, ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ತಮ್ಮ ರಿಪಬ್ಲಿಕನ್ ಪಕ್ಷ ಹೀನಾಯ ಸೋಲು ಅನುಭವಿಸಿದ್ದಕ್ಕೆ ಇರಾನ್ ವಿರುದ್ಧದ ಯುದ್ಧದ ಬಗ್ಗೆಯಿದ್ದ ಜನರ ಅಸಮಾಧಾನವೂ ಪ್ರಮುಖ ಕಾರಣವಾಗಿದೆ ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ.
ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಜೀವನ ವೆಚ್ಚ ಹೆಚ್ಚಳವಾಗಿದ್ದು, ಹಣದುಬ್ಬರಕ್ಕೂ ಕಾರಣವಾಗಿದೆ. ಈ ಹಣದುಬ್ಬರ ಕೂಡ ಪಕ್ಷದ ಚುನಾವಣಾ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.






