ಅಂತರ್ಯುದ್ಧದ ನಂತರ ಸಿರಿಯಾ ಮರು ನಿರ್ಮಾಣಕ್ಕೆ ಅಂದಾಜು 19,000 ಶತಕೋಟಿ ರೂ. ಅಗತ್ಯ: ವಿಶ್ವ ಬ್ಯಾಂಕ್

Photo Credit : NDTV
ಡಮಾಸ್ಕಸ್: ದಶಕಗಳ ಕಾಲ ನಡೆದ ಅಂತರ್ಯುದ್ಧದ ನಂತರ, ಸಿರಿಯಾವನ್ನು ಮರು ನಿರ್ಮಾಣ ಮಾಡಲು ಅಂದಾಜು 19,000 ಶತಕೋಟಿ ರೂ. ಅಗತ್ಯವಿದೆ ಎಂದು ಮಂಗಳವಾರ ಪ್ರಕಟಿಸಿರುವ ತನ್ನ ಮೌಲ್ಯಮಾಪನದಲ್ಲಿ ವಿಶ್ವಸಂಸ್ಥೆ ತಿಳಿಸಿದೆ.
ಈ ವೆಚ್ಚವು 2024ರ ಸಿರಿಯಾ ಜಿಡಿಪಿಗಿಂತ ಬಹುತೇಕ ಹತ್ತು ಪಟ್ಟು ಹೆಚ್ಚಾಗಿದೆ.
2011ರಲ್ಲಿ ಅಂದಿನ ಸಿರಿಯಾ ಅಧ್ಯಕ್ಷ ಬಷರ್ ಅಸ್ಸಾದ್ ಸರಕಾರದ ವಿರುದ್ಧ ಜನರು ಸಾಮೂಹಿಕ ಪ್ರತಿಭಟನೆಗಳಿದಾಗ, ಬಷರ್ ಅಸಾದ್ ಸರಕಾರ ಜನರ ಮೇಲೆ ಮಾರಣಾಂತಿಕ ದೌರ್ಜನ್ಯವೆಸಗಿತ್ತು. ಬಳಿಕ, ಈ ಸಂಘರ್ಷ ಶಸ್ತ್ರಾಸ್ತ್ರ ದಂಗೆಗೆ ತಿರುಗಿತ್ತು. ಕೊನೆಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ವೇಳೆ ಬಷರ್ ಅಸ್ಸಾದ್ ರನ್ನು ಪದಚ್ಯುತಗೊಳಿಸಲಾಗಿತ್ತು.
ಈ ಸಂಘರ್ಷದ ವೇಳೆ ಸಿರಿಯಾದ ದೊಡ್ಡ ಪ್ರಮಾಣದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು. ವಿದ್ಯುತ್ ಗ್ರಿಡ್ ಗಳೂ ಸೇರಿದಂತೆ ಪ್ರಮುಖ ಮೂಲಸೌಲಭ್ಯಗಳಿಗೆ ಹಾನಿಯಾಗಿತ್ತು.
ಇದೀಗ ಸಿರಿಯಾವನ್ನು ಮರು ನಿರ್ಮಾಣ ಮಾಡಲು 12,320 ಶತಕೋಟಿ ರೂ.ನಿಂದ 30,360 ಶತಕೋಟಿ ರೂ. ಬೇಕಾಗಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದ್ದರೂ, ಅದರ ಮಿತವ್ಯಯದ ಅಂದಾಜಿನ ಪ್ರಕಾರ, ಸುಮಾರು 19,000 ಶತಕೋಟಿ ರೂ. ಬೇಕಾಗಬಹುದು ಎಂದು ಹೇಳಲಾಗಿದೆ.
ಸಿರಿಯಾದ ಮೂಲಸೌಕರ್ಯ ನಿರ್ಮಾಣ ವೆಚ್ಚ 7,216 ಶತಕೋಟಿ ರೂ. ಆಗಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದ್ದು, ಹಾನಿಗೊಳಗಾಗಿರುವ ವಸತಿ ಕಟ್ಟಡಗಳು ಹಾಗೂ ವಸತಿಯೇತರ ಕಟ್ಟಡಗಳ ಮರುನಿರ್ಮಾಣಕ್ಕೆ ಕ್ರಮವಾಗಿ 6,600 ಶತಕೋಟಿ ರೂ. ಹಾಗೂ 5,192 ಶತಕೋಟಿ ರೂ. ಬೇಕಾಗಬಹುದು ಎಂದು ಹೇಳಿದೆ.
ಈ ಹೂಡಿಕೆಯ ಪೈಕಿ ತೀವ್ರ ಕಾಳಗ ನಡೆದಿದ್ದ ಅಲೆಪ್ಪೊ ಹಾಗೂ ಡಮಾಸ್ಕಸ್ ಗ್ರಾಮಾಂತರ ಪ್ರಾಂತ್ಯಗಳ ಮರು ನಿರ್ಮಾಣಕ್ಕೇ ಬಹುತೇಕ ವೆಚ್ಚವಾಗಲಿದೆ ಎಂದೂ ಸಿರಿಯಾ ಮರು ನಿರ್ಮಾಣ ಮೌಲ್ಯಮಾಪನದಲ್ಲಿ ಉಲ್ಲೇಖಿಸಲಾಗಿದೆ.







