ಭ್ರಷ್ಟಾಚಾರ ಆರೋಪ: ಶೇಖ್ ಹಸೀನಾ ಪುತ್ರಿ ಸೈಮಾರನ್ನು ಅನಿರ್ಧಿಷ್ಟಾವಧಿ ರಜೆಯಲ್ಲಿರಿಸಿದ ವಿಶ್ವ ಆರೋಗ್ಯ ಸಂಸ್ಥೆ

ಸೈಮಾ ವಾಝೆದ್ | PC : @airnewsalerts
ಜಿನೆವಾ, ಜು.13: ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾದ ಪ್ರಾದೇಶಿಕ ನಿರ್ದೇಶಕಿ, ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರಿ ಸೈಮಾ ವಾಝೆದ್ ಅವರನ್ನು ಅನಿರ್ದಿಷ್ಟ ರಜೆಯಲ್ಲಿ ಕಳುಹಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಹಸೀನಾ ಅವರ ಆಡಳಿತದ ಸಂದರ್ಭದಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸೈಮಾ ಭಾಗಿಯಾಗಿದ್ದರು ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸೈಮಾ ಜುಲೈ 11ರಿಂದ ರಜೆಯಲ್ಲಿ ತೆರಳಿದ್ದು ಅವರ ಜವಾಬ್ದಾರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯಕ ಪ್ರಧಾನ ನಿರ್ದೇಶಕಿ ಡಾ. ಕ್ಯಾಥರಿನ್ ಬೊಹ್ಮೆಗೆ ವಹಿಸಲಾಗಿದೆ ಎಂದು ಸಿಬ್ಬಂದಿಗಳಿಗೆ ಸೂಚಿಸುವ ಇ-ಮೇಲ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಘೆಬ್ರಯೇಸಸ್ ರವಾನಿಸಿದ್ದಾರೆ ಎಂದು ವರದಿ ಹೇಳಿದೆ.
ಸೈಮಾ ತನ್ನ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳು ಹೇಳಿದ್ದರು. ಅಲ್ಲದೆ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪ್ರಭಾವ ಬಳಸಿ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಪದವಿ ಪಡೆದಿದ್ದರು. ಜೊತೆಗೆ, ತನ್ನ ಹುದ್ದೆ ಹಾಗೂ ತಾಯಿಯ ಅಧಿಕಾರದ ಪ್ರಭಾವ ಬಳಸಿ ಹಲವು ಬ್ಯಾಂಕ್ಗಳಿಂದ ಸುಮಾರು 2.8 ದಶಲಕ್ಷ ಡಾಲರ್ ಹಣ ಪಡೆದಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಭ್ರಷ್ಟಾಚಾರ ತಡೆ ಆಯೋಗವು ಈ ವರ್ಷದ ಆರಂಭದಲ್ಲಿ ಸೈಮಾ ವಿರುದ್ಧ ಪ್ರಕರಣ ದಾಖಲಿಸಿತ್ತು.





