ಗಾಝಾದಲ್ಲಿ ನಿಯಂತ್ರಣ ಮೀರಿದ ಸಾಂಕ್ರಾಮಿಕ ರೋಗಗಳು: ವಿಶ್ವ ಆರೋಗ್ಯ ಸಂಸ್ಥೆ ಕಳವಳ

Photo Credi : World Health Organization | United Nations
ವಿಶ್ವಸಂಸ್ಥೆ, ಅ.17: ಫೆಲೆಸ್ತೀನಿಯನ್ ಪ್ರದೇಶದ 36 ಆಸ್ಪತ್ರೆಗಳಲ್ಲಿ ಕೇವಲ 13 ಮಾತ್ರ ಭಾಗಶಃ ಕಾರ್ಯನಿರ್ವಹಿಸುತ್ತಿದ್ದು ಗಾಝಾ ಪಟ್ಟಿಯಲ್ಲಿ ಸಾಂಕ್ರಾಮಿಕ ರೋಗಗಳು ನಿಯಂತ್ರಣ ತಪ್ಪಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಮೆದುಳು ಉರಿಯೂತ, ಅತಿಸಾರ, ಉಸಿರಾಟದ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು ನಿಯಂತ್ರಣ ಮೀರಿ ಉಲ್ಬಣಿಸಿದ್ದು ದೈತ್ಯ ಸವಾಲಿಗೆ ನಾವು ಉತ್ತರಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಹನಾನ್ ಬಾಲ್ಖಿ ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಒಪ್ಪಂದದಿಂದಾಗಿ ಜೀವ ಉಳಿಸುವ ನೆರವು ಮತ್ತು ಆರೋಗ್ಯ ಸೇವೆಗಳು ಕಡೆಗೂ ಗಾಝಾದಲ್ಲಿನ ಫೆಲೆಸ್ತೀನೀಯರನ್ನು ತಲುಪುವಂತಾಗಿದೆ. ಆದರೆ ಊಹಿಸಲೂ ಸಾಧ್ಯವಾಗದಷ್ಟು ಅಗಾಧ ಸವಾಲುಗಳು ನಮ್ಮೆದುರಿಗಿವೆ. ಗಾಝಾಕ್ಕೆ ಇನ್ನಷ್ಟು ಇಂಧನಗಳು, ಇನ್ನಷ್ಟು ಆಹಾರ, ವೈದ್ಯಕೀಯ ಸಾಧನಗಳು, ವೈದ್ಯರ ಅಗತ್ಯವಿದೆ. ಆರೋಗ್ಯ ಸೇವಾ ಕ್ಷೇತ್ರ ಬಹುತೇಕ ನಾಶವಾಗಿದೆ. ಗಾಝಾ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಜನಿಸಿದ ಮಕ್ಕಳು ಶೂನ್ಯ ಪ್ರಮಾಣದ ರೋಗ ನಿರೋಧಕ ಲಸಿಕೆಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಾಝಾ ನಗರದಲ್ಲಿ ಕೇವಲ 8 ಆರೋಗ್ಯ ಕೇಂದ್ರಗಳು (ಎಲ್ಲವೂ ಭಾಗಶಃ) ಮಾತ್ರ ಕಾರ್ಯನಿರ್ವಹಿಸುತ್ತಿವೆ. 2023ರ ಅಕ್ಟೋಬರ್ 7ರಿಂದ ಗಾಝಾದ ಆರೋಗ್ಯ ವ್ಯವಸ್ಥೆಗಳ ಮೇಲೆ 800ಕ್ಕೂ ಅಧಿಕ ದಾಳಿಗಳು ನಡೆದಿದ್ದು ಸುಮಾರು 42,000 ಜನರು , ಇವರಲ್ಲಿ 25%ದಷ್ಟು ಮಕ್ಕಳು ಮಾರಣಾಂತಿಕ ಗಾಯಗಳಿಗೆ ತುತ್ತಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.







