ರಷ್ಯದಲ್ಲಿ ವಿಶ್ವದ ಮೊದಲ ಬೆನ್ನುಹುರಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

Photo Credit : X
ಮಾಸ್ಕೊ, ಅ. 24: ಚೀನಾ ಮತ್ತು ರಷ್ಯಾದ ಜಂಟಿ ವೈದ್ಯಕೀಯ ತಂಡವು ಮಾಸ್ಕೊದಲ್ಲಿ ಪಾರ್ಶ್ವವಾಯು ಪೀಡಿತ ರೋಗಿಯೊಬ್ಬರಿಗೆ ಅಂಗಾಂಶಗಳನ್ನು ಒಂದಕ್ಕೊಂದು ಜೋಡಿಸುವ ವಿಶೇಷ ತಂತ್ರಜ್ಞಾನವನ್ನು ಬಳಸಿ ವಿಶ್ವದ ಮೊದಲ ಬೆನ್ನುಹುರಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದು ‘ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
ರಷ್ಯಾದ ಸ್ಕ್ಲಿಫೋಸೊವ್ಸ್ಕಿ ಎಮರ್ಜೆನ್ಸಿ ಮೆಡಿಸಿನ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಈ ಶಸ್ತ್ರಚಿಕಿತ್ಸೆಯು 12 ಗಂಟೆಗಳ ಕಾಲ ನಡೆದಿದ್ದು, ರೋಗಿಯ ಹಾನಿಗೊಳಗಾದ ಬೆನ್ನುಹುರಿಯ ಭಾಗವನ್ನು ತೆಗೆದುಹಾಕಿ, ಮಿದುಳು ಸಾವು (ಬ್ರೈನ್ ಡೆಡ್) ಸಂಭವಿಸಿದ ದಾನಿಯ ಬೆನ್ನುಹುರಿಯ ಭಾಗವನ್ನು ಅಲ್ಲಿ ಕಸಿ ಮಾಡಲಾಯಿತು ಎಂದು ಚೀನಾದ ಶಸ್ತ್ರಚಿಕಿತ್ಸಕ ರೇನ್ ಕ್ಸಿಯಾವೋಪಿಂಗ್ ತಿಳಿಸಿದ್ದಾರೆ. ರೋಗಿಯು ಮೂರು ವರ್ಷಗಳ ಹಿಂದೆ ಬೆನ್ನುಹುರಿಯ ಗಾಯಕ್ಕೆ ತುತ್ತಾಗಿದ್ದು, ಅವರ ಬೆನ್ನುಹುರಿ ಸಂಪೂರ್ಣವಾಗಿ ತುಂಡಾಗಿತ್ತು.
ಜೀವಕೋಶದ ಪೊರೆಗಳನ್ನು ಜೋಡಿಸಲು ನೆರವಾಗುವ ‘ಪಾಲಿಥಿಲೀನ್ ಗ್ಲೈಕಾಲ್’ ಎಂಬ ರಾಸಾಯನಿಕ ಮತ್ತು ಮೈಕ್ರೋಸರ್ಜರಿ ತಂತ್ರಜ್ಞಾನವನ್ನು ಬಳಸಿ ವಿಶ್ವದ ಈ ಮೊದಲ ಬೆನ್ನುಹುರಿ ಕಸಿ ನಡೆಸಲಾಯಿತು. ಚೀನಾದ ಗುವಾಂಗ್ಕ್ಸಿ ಯುನಿವರ್ಸಿಟಿ ಆಫ್ ಚೈನೀಸ್ ಮೆಡಿಸಿನ್ನ ದ್ವಿತೀಯ ಸಂಯೋಜಿತ ಆಸ್ಪತ್ರೆಯ ತಂಡ ಮತ್ತು ರಷ್ಯಾದ ವೈದ್ಯಕೀಯ ತಜ್ಞರು ಜಂಟಿಯಾಗಿ ಈ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ‘ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.






