ಕ್ಯಾಮರೂನ್ ಅಧ್ಯಕ್ಷೀಯ ಚುನಾವಣೆ : 92 ವರ್ಷದ ಪೌಲ್ ಬಿಯಾ ಎಂಟನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆ

Photo Credit : Zohra Bensemra/Reuters
ಯಾವುಂಡೇ (ಕ್ಯಾಮರೂನ್), ಅ. 28: ಕ್ಯಾಮರೂನ್ ಅಧ್ಯಕ್ಷೀಯ ಚುನಾವಣೆಯಲ್ಲಿ 92 ವರ್ಷದ ಪೌಲ್ ಬಿಯಾ ಎಂಟನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ಘೋಷಿಸಲಾಗಿದೆ. ಇದರ ಬೆನ್ನಿಗೇ, ಈ ಫಲಿತಾಂಶದ ವಿರುದ್ಧ ದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ಸಶಸ್ತ್ರ ಪಡೆಗಳು ನಡೆಸಿರುವ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ ನಾಲ್ವರು ಪ್ರತಿಪಕ್ಷ ಬೆಂಬಲಿಗರು ಮೃತಪಟ್ಟಿದ್ದಾರೆ. ನ್ಯಾಯೋಚಿತ ಫಲಿತಾಂಶವನ್ನು ಪ್ರಕಟಿಸುವಂತೆ ಆಗ್ರಹಿಸಿ ಪ್ರತಿಪಕ್ಷಗಳ ಕಾರ್ಯಕರ್ತರು ದೇಶದ ಹಲವಾರು ನಗರಗಳಲ್ಲಿ ಬೀದಿಗಿಳಿದಿದ್ದಾರೆ.
ಅಕ್ಟೋಬರ್ 12ರಂದು ಮತದಾನ ನಡೆದಿತ್ತು. ಈಗ ಎಂಟನೇ ಬಾರಿಗೆ ಆಯ್ಕೆಯಾಗಿರುವ 92 ವರ್ಷದ ಬಿಯಾ 2032ರವರೆಗೂ ಅಧಿಕಾರದಲ್ಲಿ ಮುಂದುವರಿಯಬಹುದು.
ಕ್ಯಾಮರೂನ್ನ ಸಾಂವಿಧಾನಿಕ ಮಂಡಳಿಯು ಸೋಮವಾರ ಅಂತಿಮವಾಗಿ ಬಿಯಾರ ಆಯ್ಕೆಯನ್ನು ದೃಢೀಕರಿಸಿತು. ಅವರು ಆಫ್ರಿಕದ ಅತ್ಯಂತ ಹಿರಿಯ ಹಾಗೂ ಜಗತ್ತಿನಲ್ಲಿ ಸುದೀರ್ಘಾವಧಿ ಆಡಳಿತ ನಡೆಸಿದ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಅವರು 43 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅವರು ಮೂರು ಕೋಟಿ ಜನಸಂಖ್ಯೆಯ ಕ್ಯಾಮರೂನ್ ದೇಶವನ್ನು 1982ರಿಂದ ಆಳುತ್ತಿದ್ದಾರೆ.







