ಸ್ಪೇನ್ ನಲ್ಲಿ ಭೀಕರ ಕಾಳ್ಗಿಚ್ಚು: ಕಾರುಗಳಲ್ಲಿ ಸಿಲುಕಿ ಕನಿಷ್ಠ 11 ಮೃತ್ಯು

Credit: Reuters Photo
ಮ್ಯಾಡ್ರಿಡ್: ಸ್ಪೇನ್ ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರ ಕಾಳ್ಗಿಚ್ಚಿಗೆ ತುತ್ತಾಗಿದ್ದು, ದಕ್ಷಿಣದ ಅಲ್ಮೇರಿಯಾ ಪ್ರಾಂತ್ಯದಾದ್ಯಂತ ಬೆಂಕಿಯ ಜ್ವಾಲೆಗಳು ಕ್ಷಿಪ್ರವಾಗಿ ವ್ಯಾಪಿಸುತ್ತಿವೆ. ಶುಕ್ರವಾರ ಮಧ್ಯರಾತ್ರಿಯಿಂದ ವ್ಯಾಪಕವಾಗಿ ಹರಡುತ್ತಿರುವ ಈ ಕಾಳ್ಗಿಚ್ಚಿನಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.
ಮೃತರಲ್ಲಿ ಹಲವರ ಮೃತದೇಹಗಳು ಸುಟ್ಟು ಕರಕಲಾದ ವಾಹನಗಳಲ್ಲಿ ಪತ್ತೆಯಾಗಿವೆ. ವೇಗವಾಗಿ ಮುನ್ನುಗ್ಗುತ್ತಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಅವರು ಸಾವಿಗೀಡಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮತ್ತೆ ಕೆಲವರು ಕಾರುಗಳನ್ನು ತೊರೆದು ಓಡಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಬೆಂಕಿಗೆ ಆಹುತಿಯಾಗಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ಕಾಳ್ಗಿಚ್ಚಿನ ಪರಿಣಾಮ ಗ್ರಾಮಗಳ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಬೆಂಕಿಯ ಜ್ವಾಲೆಗಳು ವೇಗವಾಗಿ ವಸತಿ ಪ್ರದೇಶಗಳತ್ತ ಮುನ್ನುಗ್ಗುತ್ತಿವೆ. ಇದರಿಂದ ಆ್ಯಂಡಲೂಸಿಯಾ ಸ್ವಾಯತ್ತ ಪ್ರದೇಶದ ಲಾಸ್ ಗಲ್ಲಾರ್ಡೋಸ್ ಸುತ್ತಮುತ್ತಲಿನ ಸಮುದಾಯಗಳಲ್ಲಿ ಆತಂಕ ಮನೆ ಮಾಡಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರವೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಲಾಸ್ ಗಲ್ಲಾರ್ಡೋಸ್ ಗುಡ್ಡುಗಾಡು ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಅಧಿಕಾರಿಗಳು ನಿಗದಿಪಡಿಸಿರುವ ಸುರಕ್ಷಿತ ಮಾರ್ಗಗಳ ಮೂಲಕ ತಕ್ಷಣ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಡಾರ್ ಸಮೀಪದ ದಟ್ಟ ಅರಣ್ಯ ಪ್ರದೇಶದ ಗ್ರಾಮದಲ್ಲಿ ವಾಸಿಸುವ ಜನರು ಸುರಕ್ಷತೆಯ ದೃಷ್ಟಿಯಿಂದ ಮನೆಗಳಲ್ಲೇ ಉಳಿಯುವಂತೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ.
ಆದರೆ, ಬೆಂಕಿಯ ತೀವ್ರತೆ ಮತ್ತು ದಟ್ಟ ಹೊಗೆಯಿಂದ ಗ್ರಾಮದಲ್ಲಿಯೇ ಉಳಿಯುವುದು ಅಸಾಧ್ಯವಾಗಿದೆ ಎಂದು ಕೆಲ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಕಾಳ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಮತ್ತು ತುರ್ತು ಸೇವಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ.






