ಯೆಮನ್: ಹೌದಿಗಳ ವಿರುದ್ಧ ಬ್ರಿಟನ್ ವೈಮಾನಿಕ ದಾಳಿ

PC : NDTV
ಸನಾ: ಬ್ರಿಟನ್ ಸೇನೆ ಅಮೆರಿಕದೊಂದಿಗೆ ಸೇರಿಕೊಂಡು ಯೆಮನ್ ನ ಹೌದಿ ಬಂಡುಕೋರರನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಹೌದಿಗಳು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಸಾಗುವ ಹಡಗುಗಳ ಮೇಲಿನ ದಾಳಿಯಲ್ಲಿ ಬಳಸುವ ಡ್ರೋನ್ ಗಳ ಉತ್ಪಾದನೆಗೆ ಬಳಸುತ್ತಿದ್ದ ಕಟ್ಟಡಗಳ ಸಮುಚ್ಛಯವನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿರುವುದಾಗಿ ಬ್ರಿಟನ್ ನ ರಕ್ಷಣಾ ಸಚಿವಾಲಯ ಹೇಳಿದೆ.
ಬ್ರಿಟನ್ ನ ರಾಯಲ್ ಏರ್ಫೋರ್ಸ್ನ ಟೈಫೂನ್ ಎಫ್ಜಿಆರ್4 ಯುದ್ಧವಿಮಾನಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ನಾಗರಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಕತ್ತಲಾದ ಬಳಿಕ ದಾಳಿ ನಡೆಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ನೌಕಾಯಾನದ ಸ್ವಾತಂತ್ರ್ಯಕ್ಕೆ ಹೌದಿಗಳಿಂದ ಎದುರಾಗಿರುವ ನಿರಂತರ ಬೆದರಿಕೆಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಕೆಂಪು ಸಮುದ್ರದ ಮೂಲಕ ಸರಕು ಸಾಗಾಟದಲ್ಲಿ ಈಗಾಗಲೇ 55%ದಷ್ಟು ಕುಸಿತವಾಗಿರುವುದರಿಂದ ಕೋಟ್ಯಾಂತರ ನಷ್ಟವಾಗಿದ್ದು ಪ್ರಾದೇಶಿಕ ಅಸ್ಥಿರತೆಗೆ ಉತ್ತೇಜನ ನೀಡಿದೆ ಮತ್ತು ಬ್ರಿಟನ್ ನ ಕುಟುಂಬಗಳ ಆರ್ಥಿಕ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ' ಎಂದು ಬ್ರಿಟನ್ ನ ರಕ್ಷಣಾ ಇಲಾಖೆಯ ಸಹಾಯಕ ಸಚಿವ ಜಾನ್ ಹೀಲಿ ಹೇಳಿದ್ದಾರೆ.





