ಯೆಮನ್ ಸಂಘರ್ಷದ ಬೆನ್ನಲ್ಲೇ ಸೌದಿ ರಾಜಧಾನಿಯಲ್ಲಿ ಸಂಭಾವ್ಯ ವಾಯುದಾಳಿ ಆತಂಕ

Photo Credit : X
ರಿಯಾದ್, ಸೆ. 19: ನೆರೆಹೊರೆಯ ರಾಷ್ಟ್ರವಾದ ಯೆಮನ್ನಲ್ಲಿ ಸಂಘರ್ಷ ಮುಂದುವರಿದಿರುವಂತೆಯೇ, ಸೌದಿ ರಾಜಧಾನಿ ರಿಯಾದ್ನಲ್ಲಿ ಶನಿವಾರ ಮುಂಜಾನೆ ಭಾರೀ ಸ್ಫೋಟದ ಸದ್ದುಗಳು ಕೇಳಿಬಂದಿರುವುದಾಗಿ ವರದಿಯಾಗಿದೆ. ಇದರ ಬೆನ್ನಲ್ಲೇ ಸೌದಿ ಅಧಿಕಾರಿಗಳು ಮೊದಲ ಬಾರಿಗೆ ಸಂಭಾವ್ಯ ವಾಯುದಾಳಿಯ ಬಗ್ಗೆ ರಾಜಧಾನಿಯ ಜನರಿಗೆ ಕಟ್ಟೆಚ್ಚರದ ಸಂದೇಶವನ್ನು ಜಾರಿಗೊಳಿಸಿದ್ದಾರೆ.
ಜುಲೈನಲ್ಲಿ ಸೌದಿ ಬೆಂಬಲಿತ ಯೆಮನ್ ಸರಕಾರದ ಪಡೆಗಳು ಹಾಗೂ ಹೌದಿ ಬಂಡುಕೋರರ ನಡುವೆ ಸಂಘರ್ಷ ಭುಗಿಲೆದ್ದಿತ್ತು. ಆನಂತರ ಹೌದಿ ಬಂಡುಕೋರರು, ಸೌದಿಗೆ ಕೆಂಪು ಸಮುದ್ರ ಪ್ರದೇಶದಲ್ಲಿ ನೌಕಾಯಾನಕ್ಕೆ ದಿಗ್ಬಂಧನ ವಿಧಿಸಿದ್ದರು ಹಾಗೂ ಕೆಂಪು ಸಮುದ್ರದಲ್ಲಿ ಹಾದುಹೋಗುವ ಹಡಗುಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದ್ದರು.
ಸೌದಿ ಅರೇಬಿಯ ಹಾಗೂ ಹೌದಿ ಬಂಡುಕೋರರ ನಡುವಿನ ಸಂಘರ್ಷ ಮೊದಲ ಬಾರಿಗೆ ರಾಜಧಾನಿ ರಿಯಾದ್ಗೆ ತಲುಪಿದ್ದು, ಇದರಿಂದಾಗಿ ಅಮೆರಿಕ ಹಾಗೂ ಇರಾನ್ ನಡುವಿನ ಏಳು ತಿಂಗಳ ಸಂಘರ್ಷದಿಂದ ಆಘಾತಗೊಂಡಿರುವ ಜಾಗತಿಕ ಆರ್ಥಿಕತೆ ಇನ್ನಷ್ಟು ತತ್ತರಿಸಿರುವ ಆತಂಕವುಂಟಾಗಿದೆ.
‘‘ಶನಿವಾರ ಮುಂಜಾನೆ 3 ಗಂಟೆಯ ವೇಳೆಗೆ ರಿಯಾದ್ನ ನಿವಾಸಿಗಳಿಗೆ ಪ್ರದೇಶವು ಶತ್ರುವಿನ ಬೆದರಿಕೆಗೆ ಒಳಗಾಗಿದ್ದು, ಜನರು ಮನೆಯೊಳಗೆ ಇರಬೇಕೆಂದು’’ ಸಂದೇಶವನ್ನು ನೀಡಲಾಗಿತ್ತು.
ಆನಂತರ ರಿಯಾದ್ನಲ್ಲಿ ಎರಡು ಸ್ಫೋಟದ ಸದ್ದುಗಳು ಕೇಳಿಬಂದಿದ್ದವು. ಅರ್ಧತಾಸಿನ ಬಳಿಕ ಕಟ್ಟೆಚ್ಚರದ ಸಂದೇಶವನ್ನು ಹಿಂಪಡೆಯಲಾಗಿತ್ತು.
ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಹೌದಿ ಬಂಡುಕೋರರು ಮಿಂಚಿನ ವೇಗದಲ್ಲಿ ನಡೆಸಿದ ಆಕ್ರಮಣದಲ್ಲಿ ಯೆಮನ್ನ ಕೆಂಪು ಸಮುದ್ರ ಕರಾವಳಿಯನ್ನು ವಶಪಡಿಸಿಕೊಳ್ಳುವ ಮೂಲಕ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿರುವ ಬಾಬ್ ಅಲ್-ಮನ್ದಾಬ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಿದ್ದರು.






