Yemen | ಮೋಖಾ ಬಂದರು ಮೇಲೆ ಹೌತಿಗಳಿಂದ ದಾಳಿ: ಆರು ಮಂದಿ ಮೃತ್ಯು

Photo: x.com/Jerusalem_Post
ಮೋಖಾ (ಯೆಮೆನ್), ಆ. 15: ಯೆಮೆನ್ನ ಸರಕಾರಿ ನಿಯಂತ್ರಣದಲ್ಲಿರುವ ಮೋಖಾ ಬಂದರು ನಗರದ ಮೇಲೆ ಶುಕ್ರವಾರ ಮುಂಜಾನೆ ಹೌತಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ ಎಂದು Aljazeera ವರದಿ ಮಾಡಿದೆ.
ಮೃತರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಯೆಮೆನ್ನ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರಕಾರದ ಮಿಲಿಟರಿ ಅಧಿಕಾರಿಯೊಬ್ಬರು AFP ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿದ್ದಾರೆ. ಇರಾನ್ನ ಬೆಂಬಲ ಹೊಂದಿರುವ ಹೌತಿಗಳು ಬಂದರಿನಲ್ಲಿ ಸರಕು ಇಳಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಐದು ಕ್ಷಿಪಣಿಗಳನ್ನು ಹಾರಿಸಿದ್ದಾರೆ. ದಾಳಿಯಲ್ಲಿ ಎರಡು ಹಡಗುಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
2022ರಲ್ಲಿ ಸರಕಾರಿ ಪಡೆಗಳೊಂದಿಗಿನ ಹೋರಾಟ ನಿಲ್ಲಿಸಿದ ಕದನ ವಿರಾಮ ಜಾರಿಗೆ ಬಂದ ಬಳಿಕ ಯೆಮೆನ್ನಲ್ಲಿ ಹಲವು ವರ್ಷಗಳಿಂದ ಸಂಘರ್ಷ ತಗ್ಗಿತ್ತು. ಆದರೆ, ಇತ್ತೀಚಿನ ಹೌತಿ ದಾಳಿಗಳು ದೇಶದಲ್ಲಿ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಭೀತಿಯನ್ನು ಹುಟ್ಟುಹಾಕಿವೆ.




