ಥುಬಾಬ್ ಜಿಲ್ಲೆಯ ಬಹುಭಾಗ ಯಮನ್ ಪಡೆಗಳ ವಶಕ್ಕೆ: ವರದಿ

Photo Credit : aljazeera.com
ಏಡನ್: ಬಾಬ್ ಅಲ್-ಮಂದಾಬ್ ಬಳಿಯ ಥುಬಾಬ್ ಅನ್ನು ಯಮನ್ ಸರಕಾರಿ ಪಡೆಗಳು ಸೋಮವಾರ ಕಹ್ಬೂಬ್ ಬೆಟ್ಟಗಳಿಂದ ಮಾಡಿದ ತಂತ್ರಗಾರಿಕೆಯ ದಾಳಿಯ ಮೂಲಕ ತಮ್ಮ ನಿಯಂತ್ರಣಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಹೌತಿಗಳ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ಯಮನ್ ಸಶಸ್ತ್ರ ಪಡೆಗಳು ಹೊಸ ದಾಳಿಗಳನ್ನು ನಡೆಸಿವೆ ಎಂದು ಯಮನ್ ಸಶಸ್ತ್ರ ಪಡೆಗಳ ವಕ್ತಾರ ಮೇ| ಜ| ಮಾಜೆದ್ ಅಬ್ದುಲ್ಲಾ ಅಲ್-ನುಜೈಲಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳು ಅನುಮೋದಿತ ಯೋಜನೆಗಳ ಪ್ರಕಾರ, ವಿವಿಧ ಸಮರ ವಲಯ ಮತ್ತು ರಂಗಗಳಲ್ಲಿ ತಮ್ಮ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸಿವೆ. ಸಾದಾ, ಅಲ್-ಜೌಫ್ ಮತ್ತು ತೈಜ್ನಾದ್ಯಂತ ಹೌದಿ ಮಿಲಿಟರಿ ಮೂಲಸೌಕರ್ಯಗಳ ಮೇಲೆ ನಮ್ಮ ಸಶಸ್ತ್ರ ಪಡೆಗಳು 1,122 ದಾಳಿಗಳನ್ನು ಕಾರ್ಯಗತಗೊಳಿಸಿವೆ. ಈ ಕಾರ್ಯಾಚರಣೆಗಳ ಪರಿಣಾಮವಾಗಿ ಹೌತಿಗಳ 1,747 ಮಿಲಿಟರಿ ಘಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು 364 ಮಿಲಿಟರಿ ವಾಹನಗಳು, ಉಪಕರಣಗಳು ಮತ್ತು ಪೂರೈಕೆ ಸಾರಿಗೆ ಘಟಕಗಳನ್ನು ಧ್ವಂಸಗೊಳಿಸಲಾಗಿದೆ' ಎಂದು ಅಲ್-ನುಜೈಲಿ ತಿಳಿಸಿದರು.
ಸರಕಾರಿ ಪಡೆಗಳು ಪಶ್ಚಿಮ ಕರಾವಳಿಯುದ್ದಕ್ಕೂ ಮತ್ತು ಮೊಖಾ ನಗರದತ್ತ ಉತ್ತರಕ್ಕೆ ಮುನ್ನಡೆಯುತ್ತಿದ್ದು ಬಾಬ್ ಅಲ್ ಮಂದಾಬ್ ಮತ್ತು ಯಯುನ್ ದ್ವೀಪದಲ್ಲಿ ಹೌತಿ ನೆಲೆಗಳನ್ನು ಸುತ್ತುವರಿಯಲಾಗಿದೆ ಎಂದು ಅಲ್ ಅರೇಬಿಯಾ ವರದಿ ಮಾಡಿದೆ.
ಯಮನ್ನ ಮತ್ತೊಂದು ನಗರವನ್ನು ವಶಕ್ಕೆ ಪಡೆದ ಹೌತಿಗಳು
ಇರಾನ್ ಬೆಂಬಲಿತ ಹೌತಿ ಬಂಡುಕೋರರು ನೈಋತ್ಯ ಯಮನ್ನಲ್ಲಿ ಮತ್ತೊಂದು ನಗರವನ್ನು ವಶಪಡಿಸಿಕೊಂಡಿದ್ದು, ಸೌದಿ ಬೆಂಬಲಿತ ಸರಕಾರಿ ಪಡೆಗಳಿಗೆ ಆಘಾತ ನೀಡಿದ್ದಾರೆ. ಹೌತಿಗಳು ಈ ಪ್ರದೇಶದ ಆಯಕಟ್ಟಿನ ಪ್ರಾದೇಶಿಕ ರಾಜಧಾನಿ ತೈಜ್ನತ್ತ ಮುನ್ನುಗ್ಗಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರವು ರವಿವಾರ ಹೌತಿಗಳ ವಿರುದ್ಧ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸುವ ಕೆಲವೇ ಕ್ಷಣಗಳ ಮೊದಲು `ತುರ್ಬಾ' ನಗರವು ಹೌತಿಗಳ ವಶವಾಯಿತು. ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ಈ ಉಲ್ಬಣವು ನಾಲ್ಕು ವರ್ಷಗಳ ಕದನ ವಿರಾಮದ ನಂತರ ಯಮನ್ನಲ್ಲಿ ಮತ್ತೆ ಅಂತರ್ಯುದ್ಧವನ್ನು ಜೀವಂತಗೊಳಿಸಿದೆ. ತುರ್ಬಾ ನಗರವು ಪ್ರಾದೇಶಿಕ ರಾಜಧಾನಿ ತೈಜ್ ಅನ್ನು, ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ಮಧ್ಯಂತರ ಕೇಂದ್ರವಾಗಿರುವ ಬಂದರು ನಗರ ಏಡನ್ನೊಂದಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿದ್ದು ಸರಕಾರಿ ಪಡೆಗಳಿಗೆ ಈ ನಗರವು ಪ್ರಮುಖ ನೆಲೆಯಾಗಿತ್ತು.






