ಇರಾನ್ ವಿಮಾನವನ್ನು ಇಳಿಯದಂತೆ ತಡೆಯಲು ಸನಾ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಿದ ಯೆಮನ್

Photo Credit: AP
ಏಡನ್, ಜು.13: ಇರಾನ್ ನ ವಿಮಾನವೊಂದು ವಿಮಾನ ನಿಲ್ದಾಣದಲ್ಲಿ ಇಳಿಯದಂತೆ ತಡೆಯುವ ಉದ್ದೇಶದಿಂದ ಸೋಮವಾರ ಸನಾ ವಿಮಾನ ನಿಲ್ದಾಣದ ರನ್ ವೇಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಯೆಮನ್ ಸಶಸ್ತ್ರ ಪಡೆಗಳು ತಿಳಿಸಿವೆ.
ಯೆಮನ್ನ ವೈಮಾನಿಕ ಪ್ರದೇಶ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುವ ಯಾವುದೇ ವಿಮಾನವನ್ನು ಎದುರಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ, ಯೆಮನ್ ರಕ್ಷಣಾ ಸಚಿವಾಲಯವು ಸನಾ ವಿಮಾನ ನಿಲ್ದಾಣವನ್ನು ತೆರವುಗೊಳಿಸುವಂತೆ ಕರೆ ನೀಡಿದೆ.
ಯೆಮನ್ ನಲ್ಲಿನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ರಾಜಧಾನಿ ಸನಾ ಸೇರಿದಂತೆ ದೇಶದ ವಾಯವ್ಯ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಸೌದಿ ಅರೆಬಿಯಾ ಬೆಂಬಲಿತ, ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಯೆಮನ್ ಸರ್ಕಾರ ದಕ್ಷಿಣ ಭಾಗದಲ್ಲಿ ಕಾರ್ಯಾಚರಿಸುತ್ತಿದೆ.
ಹೌದಿ ಬಂಡುಕೋರರು ಯೆಮನ್ ನ ರಾಷ್ಟ್ರೀಯ ವಿಮಾನಗಳು ರಾಜಧಾನಿ ಸನಾದ ವಿಮಾನ ನಿಲ್ದಾಣದಲ್ಲಿ ಇಳಿಯದಂತೆ ತಡೆದಿದ್ದಾರೆ. ಮತ್ತೊಂದೆಡೆ, ಇರಾನ್ನ ವಿಮಾನವೊಂದು ಯೆಮನ್ ಭೂಪ್ರದೇಶವನ್ನು ಉಲ್ಲಂಘಿಸಲು ಅವರು ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ. ಈ ಕಾರಣದಿಂದ ವಿಮಾನ ನಿಲ್ದಾಣದ ರನ್ವೇಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಯೆಮನ್ನ ವೈಮಾನಿಕ ಪ್ರದೇಶದ ಯಾವುದೇ ಉಲ್ಲಂಘನೆಗೆ ಇರಾನ್ ಕಾನೂನುಬದ್ಧವಾಗಿ ಮತ್ತು ನೈತಿಕವಾಗಿ ಜವಾಬ್ದಾರಿಯಾಗಿರಬೇಕಾಗುತ್ತದೆ.
'ಯೆಮನ್ಗೆ ತನ್ನದೇ ಆದ ಜನ ಮತ್ತು ನಾಯಕತ್ವವಿದೆ. ನೆಲ, ಸಮುದ್ರ ಮತ್ತು ಆಕಾಶದಲ್ಲಿ ದೇಶವನ್ನು ರಕ್ಷಿಸಲು ಅವರು ಸಿದ್ಧರಾಗಿದ್ದಾರೆ' ಎಂದು ಯೆಮನ್ ನ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.
ಸನಾ ವಿಮಾನ ನಿಲ್ದಾಣದ ಮೇಲಿನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೌದಿ ಬಂಡುಕೋರರು ಸೋಮವಾರ ಹೇಳಿದ್ದು, ಈ ದಾಳಿಗೆ ಅವರು ಸೌದಿ ಅರೆಬಿಯಾವನ್ನು ದೂಷಿಸಿದ್ದಾರೆ.






