ಪುಟಿನ್ ವಿರುದ್ಧ ದಂಗೆ ಎದ್ದಿದ್ದ ವ್ಯಾಗ್ನರ್ ಮುಖ್ಯಸ್ಥ ಯೆವ್ಗಿನಿ ವಿಮಾನ ಅಪಘಾತದಲ್ಲಿ ಮೃತ್ಯು

ಯೆವ್ಗಿನಿ ಪ್ರಿಗೋಝಿನ್ (Photo: Twitter)
ಮಾಸ್ಕೊ: ಕಳೆದ ಜೂನ್ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ವಿಫಲ ಕ್ಷಿಪ್ರಕ್ರಾಂತಿ ನಡೆಸಿದ್ದ ರಷ್ಯಾದ ಬಾಡಿಗೆ ಸೇನೆ ಮುಖ್ಯಸ್ಥ ಯೆವ್ಗಿನಿ ಪ್ರಿಗೋಝಿನ್ ಬುಧವಾರ ವಿಮಾನ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ಯೆವ್ಗಿನಿ ಪ್ರಯಾಣಿಸುತ್ತಿದ್ದ ಎಂಬ್ರೆಯರ್ ಎಕ್ಸಿಕ್ಯೂಟಿವ್ ಜೆಟ್ ಪತನಗೊಂಡಿದೆ ಎಂದು ಇಂಟರ್ನ್ಯಾಷನಲ್ ಏವಿಯೇಶನ್ ಎಚ್ಕ್ಯೂ ವೆಬ್ಸೈಟ್ ಹೇಳಿದೆ. ತಾಂತ್ರಿಕ ವೈಫಲ್ಯದ ಹೊರತಾಗಿ ಸಿಬ್ಬಂದಿಯ ಪ್ರಮಾದದಿಂದ ಕಳೆದ 20 ವರ್ಷಗಳ ಸೇವೆಯಲ್ಲಿ ಸಂಭವಿಸಿದ ಮೊದಲ ದುರಂತ ಇದಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡಿದ್ದ ವ್ಯಾಗ್ನರ್ ಗ್ರೂಪ್, ರಷ್ಯಾ ಸೇನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸಾಕಷ್ಟು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತಿಲ್ಲ ಎಂದು ದೂರಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೊಯಿಗು ಅವರ ಪದಚ್ಯುತಿಯನ್ನು ಗುರಿಯಾಗಿಟ್ಟುಕೊಂಡು ಕ್ಷಿಪ್ರಕ್ರಾಂತಿಗೆ ಮುಂದಾಗಿತ್ತು. ರಷ್ಯಾದ ದಕ್ಷಿಣ ಭಾಗದ ನಗರ ರೊಸ್ತೋವ್ ಆನ್ ಡಾನ್ ಎಂಬಲ್ಲಿರುವ ಸೇನಾ ಕೇಂದ್ರ ಕಚೇರಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಿತ್ತು.
ಈ ಕ್ರಾಂತಿಯ ಹಿಂದೆ ಇರುವವರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆ ನೀಡಿದ್ದರು. ಇದು ವಿಶ್ವಾಸದ್ರೋಹ ಹಾಗೂ ವಿಶ್ವಾಸದ್ರೋಹ ಎಂದು ಬಣ್ಣಿಸಿದ್ದರು. ಬೆಲರಸ್ ಅಧ್ಯಕ್ಷ ಅಲೆಗ್ಸಾಂಡರ್ ಲುಕ್ಷೆಂಕೊ ವಹಿಸಿದ ಮಧ್ಯಸ್ಥಿಕೆಯ ಬಳಿಕ 24 ಗಂಟೆಗಳ ಒಳಗಾಗಿ ಕಾರ್ಯಾಚರಣೆ ವಾಪಾಸು ಪಡೆದಿದ್ದರು.