ನೀವು ಯುದ್ಧವನ್ನು ಪ್ರಾರಂಭಿಸಬಹುದು, ಆದರೆ ನಾವು ಕೊನೆಗೊಳಿಸುತ್ತೇವೆ: `ಗ್ಯಾಂಬ್ಲರ್' ಟ್ರಂಪ್ ಗೆ ಇರಾನ್ ಎಚ್ಚರಿಕೆ

( ಟ್ರಂಪ್ ) ಸಾಂದರ್ಭಿಕ ಚಿತ್ರ
ಟೆಹ್ರಾನ್: ಇರಾನಿನ ಪರಮಾಣು ನೆಲೆಗಳ ಮೇಲೆ ರವಿವಾರ ಅಮೆರಿಕ ನಡೆಸಿದ ಬಾಂಬ್ ದಾಳಿಯು ಅಮೆರಿಕಕ್ಕೆ ತಿರುಗುಬಾಣ ಆಗಲಿದ್ದು ಇರಾನ್ ನ `ಕಾನೂನುಬದ್ಧ ಗುರಿಗಳ' ವ್ಯಾಪ್ತಿಯನ್ನು ಹೆಚ್ಚಿಸಿದೆ ಎಂದು ಇರಾನ್ ಮಿಲಿಟರಿಯ ವಕ್ತಾರರು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
` ಅಮೆರಿಕ ತನ್ನ ಕೃತ್ಯಗಳಿಗಾಗಿ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ . ಗ್ಯಾಂಬ್ಲರ್(ಅಪಾಯದ ಜೊತೆ ಆಟವಾಡುವವನು ಎಂಬ ಅರ್ಥದಲ್ಲಿ) ಮಿ. ಟ್ರಂಪ್. ಈ ಯುದ್ಧವನ್ನು ನೀವು ಪ್ರಾರಂಭಿಸಿರಬಹುದು. ಆದರೆ ಇದನ್ನು ಅಂತ್ಯಗೊಳಿಸುವವರು ನಾವು' ಎಂದು ಇರಾನ್ ಮಿಲಿಟರಿಯ ವಕ್ತಾರ ಇಬ್ರಾಹಿಂ ಜೊಲ್ಫಾಕಾರಿ ವೀಡಿಯೊ ಹೇಳಿಕೆಯ ಮೂಲಕ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.
ಇರಾನಿನ ಪರಮಾಣು ನೆಲೆಗಳ ಮೇಲೆ ದಾಳಿಯ ಮೂಲಕ ಅಮೆರಿಕವು ರಾಜತಾಂತ್ರಿಕತೆಯನ್ನು ನಾಶಗೊಳಿಸಲು ನಿರ್ಧರಿಸಿದೆ. ಅಮೆರಿಕದ ದಾಳಿಗೆ ಸ್ವಯಂ ರಕ್ಷಣೆಯ ಹಕ್ಕಿನ ಭಾಗವಾಗಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದೇವೆ. ಇರಾನಿನ ಪ್ರಮಾಣಾನುಗುಣ ಪ್ರತಿಕ್ರಿಯೆಯ ಸಮಯ, ಸ್ವರೂಪ ಮತ್ತು ಪ್ರಮಾಣವನ್ನು ಮಿಲಿಟರಿ ನಿರ್ಧರಿಸುತ್ತದೆ ಎಂದು ವಿಶ್ವಸಂಸ್ಥೆಗೆ ಇರಾನಿನ ರಾಯಭಾರಿ ಅಮೀರ್ ಸಯೀದ್ ಇರಾವಾನಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಹೇಳಿದ್ದಾರೆ.





