ಬಂಗಿ ಜಂಪ್ ಮಾಡುವಾಗ ಸುರಕ್ಷತಾ ಹಗ್ಗ ಕಟ್ಟಲು ಮರೆತ ಸಿಬ್ಬಂದಿ; ಯುವತಿ ಮೃತ್ಯು

Photo Credit ; PTI
ಬ್ರಸೀಲಿಯಾ, ಜೂ.14: ಬ್ರೆಝಿಲ್ ನಲ್ಲಿ ಬಂಗಿ ಜಂಪಿಂಗ್ ಮಾಡುವ ವೇಳೆ ಸಿಬ್ಬಂದಿ ಸುರಕ್ಷತಾ ಹಗ್ಗವನ್ನು ಕಟ್ಟಲು ‘ಮರೆತಿದ್ದರಿಂದ’ ಸೇತುವೆಯಿಂದ ಕೆಳಗೆ ಬಿದ್ದ 21 ವರ್ಷದ ಯುವತಿ ಮೃತಪಟ್ಟಿದ್ದಾರೆ.
ಸಾವೊ ಪಾಲೊದ ಲೈಮೇರಾದಲ್ಲಿ ನಡೆದ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಇದರಲ್ಲಿ ಮಾರಿಯಾ ಎಡುವಾರ್ಡಾ ರೊಡ್ರಿಗಸ್ ಡಿ ಫ್ರೈಟಾಸ್ ಎಂದು ಗುರುತಿಸಲಾದ ಯುವತಿಯನ್ನು ಸಿಬ್ಬಂದಿ ನಿಧಾನವಾಗಿ ಸೇತುವೆಯ ತುದಿಗೆ ಕರೆದೊಯ್ದು ಅಲ್ಲಿಂದ ಕೆಳಗೆ ತಳ್ಳುವುದನ್ನು ಕಾಣಬಹುದು.
ಆ ವೇಳೆ ಹಗ್ಗವನ್ನು ನೆಲದ ಮೇಲೆಯೇ ಇಡಲಾಗಿತ್ತು ಮತ್ತು ಅದನ್ನು ಆಕೆಯ ದೇಹಕ್ಕೆ ಜೋಡಿಸಿರಲಿಲ್ಲ ಎಂಬುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಮಾರಿಯಾರನ್ನು ಕನಿಷ್ಠ 130 ಅಡಿ ಎತ್ತರದಿಂದ ಕೆಳಗೆ ತಳ್ಳಲಾಗಿದೆ.
ಮಾರಿಯಾ ಜಂಪ್ ಮಾಡುವ ಮೊದಲು ಸಿಬ್ಬಂದಿ ಆಕೆಗೆ ಸುರಕ್ಷತಾ ಸಾಧನಗಳನ್ನು ಜೋಡಿಸಲು ಮರೆತಿದ್ದರು ಎಂದು ಪೊಲೀಸರನ್ನು ಉಲ್ಲೇಖಿಸಿ ‘ದಿ ಸನ್’ ವರದಿ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಕನಿಷ್ಠ ಆರು ಜನರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.






