ಉಕ್ರೇನ್ಗೆ ನೇಟೊ ಸದಸ್ಯತ್ವದ ಬದಲಾಗಿ ಅಧ್ಯಕ್ಷ ಸ್ಥಾನ ತ್ಯಜಿಸಲು ಸಿದ್ಧ: ಝೆಲೆನ್ಸ್ಕಿ

ಕೀವ್: ದೇಶಕ್ಕೆ ನೇಟೊ ಸದಸ್ಯತ್ವ ದೊರೆತರೆ ಅದಕ್ಕೆ ಬದಲಾಗಿ ಉಕ್ರೇನ್ ಅಧ್ಯಕ್ಷತೆಯನ್ನು ತಕ್ಷಣ ತ್ಯಜಿಸಲು ಸಿದ್ಧ ಎಂದು ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ಗೆ ಶಾಂತಿ ಸಿಗುವುದಾದರೆ, ನಾನು ಹುದ್ದೆ ತ್ಯಜಿಸುವ ಅಗತ್ಯವಿದೆ ಎಂದು ನೀವು ನಿಜವಾಗಿಯೂ ಭಾವಿಸುವುದಾದರೆ ನೇಟೊ ಸದಸ್ಯತ್ವಕ್ಕೆ ಬದಲಾಗಿ ನಾನು ಹುದ್ದೆ ತ್ಯಜಿಸುತ್ತೇನೆ ಎಂದು ಝೆಲೆನ್ಸ್ಕಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ನನ್ನ ಪರಿಸ್ಥಿತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತೇನೆ ಮತ್ತು ರಶ್ಯದ ಆಕ್ರಮಣದ ಎದುರು ತನ್ನನ್ನು ರಕ್ಷಿಸಿಕೊಳ್ಳಲು ಸದೃಢ ಭದ್ರತಾ ಖಾತರಿಯನ್ನು ಅವರಿಂದ ನಿರೀಕ್ಷಿಸುತ್ತೇನೆ' ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಭದ್ರತೆ ನೆರವಿಗೆ ಬದಲಾಗಿ ಅಮೆರಿಕಕ್ಕೆ ಉಕ್ರೇನ್ನ ಪ್ರಾಕೃತಿಕ ಸಂಪನ್ಮೂಲಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಉಭಯ ದೇಶಗಳ ನಡುವೆ ಒಪ್ಪಂದ ಶೀಘ್ರ ಅಂತಿಮಗೊಳ್ಳಲಿದೆ. ಈ ನಿಟ್ಟಿನಲ್ಲಿ ನಡೆದ ಮಾತುಕತೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದವರು ಹೇಳಿದ್ದಾರೆ.





