ಉಕ್ರೇನ್ ಶರಣಾಗುವಂತೆ ಟ್ರಂಪ್ ಒತ್ತಡ: ಝೆಲೆನ್ಸ್ಕಿ ಆರೋಪ

ವೊಲೊಡಿಮಿರ್ ಝೆಲೆನ್ಸ್ಕಿ | Photo Credit : PTI
ಕೀವ್ : ರಶ್ಯಕ್ಕೆ ಶರಣಾಗುವಂತೆ ಉಕ್ರೇನ್ ಮೇಲೆ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಆರೋಪಿಸಿದ್ದು, ಅಮೆರಿಕದ ಈ ಕ್ರಮಗಳು ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಥ್ರ್ಯವನ್ನು ಕುಂದಿಸುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕ ಹೆಚ್ಚಿನ ನಿರ್ಬಂಧಗಳನ್ನು ತಡೆಹಿಡಿಯುವುದಕ್ಕೆ ಪ್ರತಿಯಾಗಿ, ಜಾಗತಿಕ ಮಾರುಕಟ್ಟೆಗಳಿಗೆ ರಶ್ಯದ ಡೀಸೆಲ್ ರಫ್ತಿಗೆ ಸೀಮಿತ ಅವಕಾಶ ನೀಡಲು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟ್ರಂಪ್ ಒಪ್ಪಿಕೊಂಡ ನಂತರ ಅಮೆರಿಕ ಮತ್ತು ಉಕ್ರೇನ್ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಯುದ್ಧಭೂಮಿಯ ಸಂಪರ್ಕ ಮತ್ತು ಸಂವಹನಕ್ಕಾಗಿ ಉಕ್ರೇನ್ನ ಸಶಸ್ತ್ರ ಪಡೆಗಳು ಬಳಸುತ್ತಿದ್ದ ಸ್ಟಾರ್ಲಿಂಕ್ ಉಪಗ್ರಹ ಸೇವೆಗಳ ಮೇಲೆಯೂ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಉಕ್ರೇನ್ ಶರಣಾಗುವಂತೆ ಒಪ್ಪಿಸಲು ಹಂತ ಹಂತದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಾನು ನಂಬುತ್ತೇನೆ. ನಮ್ಮ ಅಮೇರಿಕನ್ ಪಾಲುದಾರರು ಉಕ್ರೇನ್ಗೆ ನಷ್ಟ ಉಂಟುಮಾಡುವ ಮೂಲಕ ಯುದ್ಧವನ್ನು ಬೇಗನೆ ಕೊನೆಗೊಳಿಸಬಹುದು ಎಂದು ಯೋಜಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಆದರೆ ಪರಿಸ್ಥಿತಿ ನೋಡಿದರೆ ಹಾಗೆಯೇ ಕಾಣಿಸುತ್ತಿದೆ. ಯುದ್ಧದ ವಿಷಯದಲ್ಲಿ ಬಹಳಷ್ಟು ವಿಷಯಗಳು ಅಮೆರಿಕದ ನಿಲುವಿನ ಮೇಲೆ ಅವಲಂಬಿತವಾಗಿವೆ. ನಮ್ಮೆಲ್ಲರಿಗೂ ಮುಖ್ಯವಾಗುವ ಅನೇಕ ವಿಷಯಗಳು ಇಲ್ಲಿವೆ. ತಮ್ಮ ತಂಡವು ಅಮೆರಿಕದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಫ್ಲೋರಿಡಾದಲ್ಲಿ ನಡೆದ ಮಾತುಕತೆಯ ಫಲಿತಾಂಶಗಳು ಮತ್ತು ರಾಜತಾಂತ್ರಿಕ ಪ್ರಕ್ರಿಯೆಯ ಮುಂದಿನ ಹಂತಗಳ ಬಗ್ಗೆ ಚರ್ಚೆಗಳು ಗಮನಹರಿಸಿವೆ' ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.






