ಮಮ್ದಾನಿಗೆ ಗೆಲುವು | ಚುನಾವಣೆಯಲ್ಲಿ ಸೋಲಿಗೆ ಕಾರಣ ನೀಡಿದ ಅಮೆರಿಕಾ ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್, ನ.5: ಮಂಗಳವಾರ ನಡೆದ ಚುನಾವಣೆಗಳಲ್ಲಿ ರಿಪಬ್ಲಿಕನ್ನರಿಗೆ ಹಿನ್ನಡೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಟ್ರಂಪ್ ಮತದಾನದಲ್ಲಿ ಇರಲಿಲ್ಲ, ಮತ್ತು ಸರಕಾರದ ಕಾರ್ಯ ಸ್ಥಗಿತಗೊಂಡಿರುವುದು' ಸೋಲಿಗೆ ಎರಡು ಕಾರಣಗಳಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ಸಾಮಾಜಿಕ ಮಾಧ್ಯಮ ಟ್ರುಥ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಪ್ರಮುಖ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಜೊತೆಗೆ ಪ್ರತಿಷ್ಠಿತ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಝೊಹ್ರಾನ್ ಮಮ್ದಾನಿ ಗೆಲುವು ಸಾಧಿಸಿರುವುದರಿಂದ ಟ್ರಂಪ್ಗೆ ತೀವ್ರ ಮುಖಭಂಗವಾಗಿದೆ. ಗೆಲುವಿನ ಭಾಷಣದಲ್ಲಿ ಮಮ್ದಾನಿ `ಡೊನಾಲ್ಡ್ ಟ್ರಂಪ್, ನೀವು ನೋಡುತ್ತಿದ್ದೀರಿ ಎನ್ನುವುದು ನನಗೆ ತಿಳಿದಿದೆ. ಧ್ವನಿಯನ್ನು ಹೆಚ್ಚಿಸಿ' ಎಂದು ನೇರ ಸವಾಲು ಎಸೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್ ` ಆದ್ದರಿಂದ ಇದು ಪ್ರಾರಂಭವಾಗುತ್ತದೆ' ಎಂದು ಪೋಸ್ಟ್ ಮಾಡಿದ್ದಾರೆ. ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಶ್ವೇತಭವನ `ಟ್ರಂಪ್ ನಿಮ್ಮ ಅಧ್ಯಕ್ಷ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.





