ಕರ್ನಾಟಕದಲ್ಲಿ ಮ್ಯಾಪಿಂಗ್ ಆಗದ ಮತದಾರರ ಸಂಖ್ಯೆ 1.1 ಕೋಟಿಯೋ? 2.1 ಕೋಟಿಯೋ?

ಆತ್ಮೀಯರೇ,
ಇಂದಿನ ಪ್ರಜಾವಾಣಿಯಲ್ಲಿ ಕರ್ನಾಟಕದ SIR ಪೂರ್ವ ಮ್ಯಾಪಿಂಗ್ ಪ್ರಕ್ರಿಯೆಯ ಇತ್ತೀಚಿನ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿ ನೀಡಿದ್ದಾರೆ.
ಈ ವರದಿಯಲ್ಲಿರುವ ಎರಡು-ಮೂರು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕಿದೆ:
ರಾಜ್ಯದ ಶೇ. 20 ರಷ್ಟು ಮತದಾರರ ಮ್ಯಾಪಿಂಗ್ ಆಗಿಲ್ಲ (ಅಂದಾಜು 1.1 ಕೋಟಿ) — ಇದೇ ಗಾಬರಿಗೊಳಿಸುವ ವಿಷಯ. ಆದರೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕೊಡುತ್ತಿರುವ ಹಾಗೂ ಕೊಡದಿರುವ ಮಾಹಿತಿಗಳು ತಾಳೆಯಾಗದವರ ಸಂಖ್ಯೆ 2.1 ಕೋಟಿ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಿವೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯ ಪ್ರಕಾರ, 2025ರ ಮತದಾರರ ಪಟ್ಟಿಯ ಪ್ರಕಾರ ಅರ್ಹ ಮತದಾರರ ಸಂಖ್ಯೆ 5.57 ಕೋಟಿ. ಇದರಲ್ಲಿ ಮ್ಯಾಪಿಂಗ್ ಆದವರು 4.46 ಕೋಟಿ. ಹೀಗಾಗಿ ಮ್ಯಾಪಿಂಗ್ ಆಗದವರ ಸಂಖ್ಯೆ 1.1 ಕೋಟಿ.
ಆದರೆ ಮುಖ್ಯ ಚುನಾವಣಾಧಿಕಾರಿಗಳ ಪ್ರಕಾರ, ನೇರವಾಗಿ 2002ರ ಮತಪಟ್ಟಿಯ ಜೊತೆ ಮ್ಯಾಪಿಂಗ್ ಆದದ್ದು ಕೇವಲ 2.2 ಕೋಟಿ ಅಂದರೆ ಶೇ. 50ಕ್ಕಿಂತ ಕಡಿಮೆ.
ಉಳಿದ ಸುಮಾರು 2.3 ಕೋಟಿಯಷ್ಟು ಮತದಾರರನ್ನು ಜಿಲ್ಲಾವಾರು, ಕ್ಷೇತ್ರವಾರು ವಿವರಗಳೊಂದಿಗೆ ಹೋಲಿಸಿ ಮ್ಯಾಪಿಂಗ್ ಮಾಡಲಾಗಿದೆ ಅಥವಾ ಬಿಎಲ್ಒಗಳಿಗೆ ನೀಡಿರುವ ಹೊಸ ತಂತ್ರಾಂಶದ ಸಹಾಯದಿಂದ ಹೋಲಿಕೆ ಮಾಡಲಾಗಿದೆ.
ಅಂದರೆ ತಂತ್ರಾಂಶದ ಸಹಾಯದೊಂದಿಗೆ 2.3 ಕೋಟಿ ಮ್ಯಾಪಿಂಗ್ ಆಗಿರಬೇಕು. ಆಗ ಮಾತ್ರ ಒಟ್ಟಾರೆ ಮ್ಯಾಪಿಂಗ್ ಆದವರ ಸಂಖ್ಯೆ 4.5 ಕೋಟಿಯಾಗುತ್ತದೆ.
ಆದರೆ ಮುಖ್ಯ ಚುನಾವಣಾಧಿಕಾರಿಗಳೇ ಮಾರ್ಚ್ 26 ರಂದು SIR ವಿರೋಧಿ ಕಾರ್ಯಕರ್ತರಿಗೆ ನೀಡಿದ ಪಟ್ಟಿಯ ಪ್ರಕಾರ:
ತಂತ್ರಾಂಶ ಮತ್ತು BLO ಪರಿಶೀಲನೆ ಮೂಲಕ ತಾಳೆಯಾಗಿರುವುದು – 19,13,686
(2002ರ ಪೂರ್ವ ಮತ್ತು ನಂತರದ ಪ್ರೊಜೆನಿ ಎರಡೂ ಸೇರಿ)
ತಂತ್ರಾಂಶ ಸಲಹೆ ನೀಡಿ BLO ಇನ್ನು ಪರಿಶೀಲಿಸಬೇಕಿರುವುದು – 42,061
ಅಂದರೆ ತಂತ್ರಾಂಶ ಮತ್ತು BLO ಸೇರಿ ತಾಳೆಮಾಡಿರುವುದು ಒಟ್ಟು – 19,55,747 (20 ಲಕ್ಷಕ್ಕಿಂತ ಕಡಿಮೆ)
ಅಂದರೆ ತಾಳೆಯಾಗದ 2.3 ಕೋಟಿ ಮತದಾರರಲ್ಲಿ ಕೇವಲ 19,55,747 ಮತದಾರರ ವಿವರಗಳನ್ನು ಮಾತ್ರ ತಂತ್ರಾಂಶ ಪರಿಶೀಲನೆ ಮಾಡಿದೆ ಎಂದರ್ಥ.
ಹಾಗಿದ್ದಲ್ಲಿ, ಇನ್ನೂ 2.1 ಕೋಟಿ ಮತದಾರರು (1.1 ಕೋಟಿಯಲ್ಲ) ಅಂದರೆ ರಾಜ್ಯದ ಶೇ. 40 ರಷ್ಟು ಮತದಾರರ ಮ್ಯಾಪಿಂಗ್ ಆಗಿಲ್ಲ ಎಂದರ್ಥವಲ್ಲವೇ?
ಹೀಗಾಗಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ನೀಡಿರುವ ವಿವರಗಳಲ್ಲಿ ವೈರುಧ್ಯವಿದೆ.
ಶೇ. 100 ಮ್ಯಾಪಿಂಗ್ ಮರೀಚಿಕೆಯ ಬೆನ್ನು ಹತ್ತಿರುವ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಾರ್ಯಾಲಯದ ಕಾರ್ಯವೈಖರಿಯ ಬಗ್ಗೆ ಈ ಅಂಕಿಅಂಶಗಳು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.
ಮೇಲಾಗಿ ಯಾವ ಬಗೆಯ ತಂತ್ರಾಂಶ, ಅದಕ್ಕೆ ನೀಡಿರುವ ಮಾಹಿತಿ, ಅದರ ತರ್ಕ ಹಾಗೂ ಅದರಲ್ಲಿರುವ ಸಮಸ್ಯೆಗಳ ಬಗ್ಗೆ ಕಾರ್ಯಾಲಯ ಪಾರದರ್ಶಕವಾಗಿಲ್ಲ.
ಇವು ಈಗ ಸಾಧನೆಯಂತೆ ಕಂಡುಬಂದರೂ, SIR ಪ್ರಕ್ರಿಯೆ ಪ್ರಾರಂಭವಾದಾಗ ಹಲವು ಬಗೆಯ Logical Discrepancy ರೂಪದಲ್ಲಿ ಮತದಾರರನ್ನು ಕಾಡಲಿವೆ.
ಹೀಗಾಗಿ ಕರ್ನಾಟಕದಲ್ಲಿ ತಾಳೆಯಾಗದ, ಮ್ಯಾಪಿಂಗ್ ಆಗದ ಮತ್ತು SIR-11 ದಾಖಲೆಗಳ ಅಗ್ನಿಪರೀಕ್ಷೆಯನ್ನು ಪಾಸಾಗಬೇಕಿರುವವರ ಸಂಖ್ಯೆ 2.1 ಕೋಟಿಗಿಂತ ಹೆಚ್ಚೇ ಇರುವ ಸಾಧ್ಯತೆ ಇದೆ.
SIR ರೂಪಿಸಿರುವುದೇ ದಮನಿತ ಸಮುದಾಯಗಳನ್ನು ಮೊದಲು ಮತಪಟ್ಟಿಯಿಂದ, ನಂತರ ನಾಗರಿಕತ್ವದಿಂದ ಹೊರಗಿಡಲು. ಒಳಗೊಳ್ಳಲು ಅಲ್ಲ.
ಹೀಗಾಗಿ SIR ರದ್ದಾಗದೆ ರಾಜ್ಯದ ಹಾಗೂ ದೇಶದ ದಮನಿತ ಸಮುದಾಯಗಳ ನಾಗರಿಕತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.
(ಪ್ರಜಾವಾಣಿ ವರದಿ ಮತ್ತು ಮುಖ್ಯ ಚುನಾವಣಾಧಿಕಾರಿ ನೀಡಿರುವ ಅಂಕಿ-ಅಂಶಗಳು ಅಡಕದಲ್ಲಿವೆ.)






