ಇರಾನ್ ಮೇಲಿನ ದಾಳಿಯ ಬಳಿಕ ಜಾಗತಿಕವಾಗಿ ರಾಯಭಾರ ಕಚೇರಿ ಮುಚ್ಚಿದ ಇಸ್ರೇಲ್

PC: x.com/SaharaReporters
ಕೋಪನ್ಹೇಗನ್: ಇರಾನ್ ಮೇಲೆ ಇಸ್ರೇಲ್ ಬೃಹತ್ ಪ್ರಮಾಣದ ದಾಳಿ ನಡೆಸಿದ ಬೆನ್ನಲ್ಲೇ, ವಿಶ್ವದಾದ್ಯಂತ ಇರುವ ತನ್ನ ರಾಯಭಾರ ಕಚೇರಿಗಳನ್ನು ಮುಚ್ಚಿದೆ. ಜತೆಗೆ ಎಲ್ಲೂ ಯಹೂದಿ ಅಥವಾ ಇಸ್ರೇಲಿ ಸಂಕೇತಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸದಂತೆ, ಇಸ್ರೇಲ್ ನಾಗರಿಕರು ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಿದೆ.
ಎಲ್ಲ ರಾಯಭಾರ ಕಚೇರಿಗಳ ವೆಬ್ಸೈಟ್ಗಳಲ್ಲಿ ಈ ಸೂಚನೆಯನ್ನು ನೀಡಲಾಗಿದೆ. ಇಸ್ರೇಲ್ ಸದ್ಯಕ್ಕೆ ಯಾವುದೇ ರಾಜತಾಂತ್ರಿಕ ಸೇವೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಯಾವುದೇ ದ್ವೇಷ ಚಟುವಟಿಕೆಗಳನ್ನು ಎದುರಿಸಿದಲ್ಲಿ, ಸ್ಥಳೀಯ ಭದ್ರತಾ ಪಡೆಗಳ ಜತೆ ಸಹಕರಿಸುವಂತೆ ಸಲಹೆ ಮಾಡಿದೆ.
ಈ ರಾಯಭಾರ ಕಚೇರಿಗಳು ಎಷ್ಟು ಸಮಯ ಮುಚ್ಚಿರುತ್ತವೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬ್ರಿಟನ್ ರಾಯಭಾರ ಕಚೇರಿಯಲ್ಲಿ ದೂರವಾಣಿ ಸ್ವೀಕರಿಸಿದ ವ್ಯಕ್ತಿಯೊಬ್ಬರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಇಸ್ರೇಲ್ ನ ವಿದೇಶಾಂಗ ಕಚೇರಿ ಕೂಡಾ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿದೇಶಗಳಲ್ಲಿರುವ ಇಸ್ರೇಲಿಗಳು ತಮ್ಮ ವಾಸದ ಸ್ಥಳದ ಬಗ್ಗೆ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಪರಿಷ್ಕರಿಸಿಕೊಳ್ಳುವಂತೆ ಸಲಹೆ ಮಾಡಿದೆ. 2023 ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕವೂ ಪ್ರಜೆಗಳು ಸ್ವದೇಶಕ್ಕೆ ವಾಪಸ್ಸಾಗಲು ವಿಮಾನಗಳನ್ನು ವ್ಯವಸ್ಥೆ ಮಾಡಲು ಇಸ್ರೇಲ್ ಇದೇ ಕ್ರಮ ಕೈಗೊಂಡಿತ್ತು.
"ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವಿಶ್ವದಾದ್ಯಂತ ಇಸ್ರೇಲ್ ಮಿಷನ್ ಗಳು ಮುಚ್ಚಿರುತ್ತವೆ ಮತ್ತು ಕಾನ್ಸುಲರ್ ಸೇವೆಗಳನ್ನು ನೀಡಲಾಗುವುದಿಲ್ಲ" ಎಂದು ಅಧಿಕೃತ ಪ್ರಕಟಣೆ ಹೇಳಿದೆ.







